ಸಾರಾಂಶ
ಬಾಲ್ಯ ವಿವಾಹ ಸೇರಿದಂತೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವುದು ಕೇವಲ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲಸ ಮಾತ್ರವಲ್ಲ. ಇತರ ಇಲಾಖೆಗಳ ಸಮನ್ವಯತೆ ಮತ್ತು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿ ಬೇಕಾಗಿರುತ್ತದೆ. ಎಲ್ಲ ಇಲಾಖೆಗಳು ತಳಮಟ್ಟದಿಂದ ಸರಿಯಾಗಿ ಕಾರ್ಯ ನಿರ್ವಹಣೆ ಮಾಡುವಂತ ವ್ಯವಸ್ಥೆಯನ್ನು ಮಾಡಿ ಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಗ್ರಾಮ ಮಟ್ಟದಲ್ಲಿ ರಚನೆಯಾಗಿರುವ ಕಾವಲು ಸಮಿತಿಗಳು ಬಲವರ್ಧನೆಯಾದಲ್ಲಿ ಶೇಕಡ 90ರಷ್ಟು ಬಾಲ್ಯ ವಿವಾಹಗಳನ್ನು, ಪೋಕ್ಸೋ ಪ್ರಕರಣಗಳನ್ನು ಹಾಗೂ ಮಕ್ಕಳ ಮೇಲಿನ ಎಲ್ಲ ರೀತಿಯ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ ಭವನದ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರವಾರ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಆರ್.ಟಿ.ಇ-2009, ಪೋಕ್ಸೋ -2012, ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಹಾಗೂ ಬಾಲನ್ಯಾಯ ಕಾಯ್ದೆಗಳ ಅನುಷ್ಠಾನ ಹಾಗೂ ಮಕ್ಕಳಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮ,ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಇಲಾಖೆಗಳ ನಡುವೆ ಸಮನ್ವಯತೆ
ಬಾಲ್ಯ ವಿವಾಹ ಸೇರಿದಂತೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವುದು ಕೇವಲ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲಸ ಮಾತ್ರವಲ್ಲ. ಇತರ ಇಲಾಖೆಗಳ ಸಮನ್ವಯತೆ ಮತ್ತು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿ ಬೇಕಾಗಿರುತ್ತದೆ. ಎಲ್ಲ ಇಲಾಖೆಗಳು ತಳಮಟ್ಟದಿಂದ ಸರಿಯಾಗಿ ಕಾರ್ಯ ನಿರ್ವಹಣೆ ಮಾಡುವಂತ ವ್ಯವಸ್ಥೆಯನ್ನು ಮಾಡಿ ಕೊಳ್ಳಬೇಕು, ಇದಕ್ಕಾಗಿ ತರಬೇತಿ ಕಾರ್ಯಕ್ರಮಗಳು ಅರಿವು ಕಾರ್ಯಗಾರಗಳನ್ನು ಆಯೋಜಿಸಬೇಕು ಎಂದರು.ಮಕ್ಕಳ ರಕ್ಷಣಾ ನೀತಿಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಪಾಲಿಸಬೇಕು. ನಾಯಿ ಕಡಿತ ದಿಂದ ಮಕ್ಕಳನ್ನು ರಕ್ಷಿಸಲು ಆಯೋಗ ಸರ್ಕಾರದ ಗಮನ ಸೆಳೆಯಲಿದೆ. ಕೃಷಿ ಹೊಂಡಗಳಲ್ಲಿ ಮಕ್ಕಳು ಬಿದ್ದು ಸಾವು ಆಗುತ್ತಿರುವುದನ್ನು ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಪಾಲಿಸಲು ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ದುರಸ್ತಿ ಹಂತದ ಹಾಗೂ ಬೀಳುವ ಹಂತದಲ್ಲಿರುವ ಶಾಲಾ ಕೊಠಡಿಗಳ ಮಾಹಿತಿಯನ್ನು ತುರ್ತಾಗಿ ನೀಡಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಪೊಲೀಸ್ ಇಲಾಖೆಯಿಂದ ಪ್ರತಿ ಗುರುವಾರ ತೆರೆದ ಮನೆ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿ ಎಲ್ಲಾ ಶಾಲೆ, ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು. ಬಾಲ್ಯ ವಿವಾಹ ಪ್ರಕರಣಗಳು ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿವೆ ಇದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿ. ಇನ್ನು ಮುಂದೆ ಕಾವಲು ಸಮಿತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿರುವುದಾಗಿ ತಿಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ, ವೆಂಕಟೇಶ್, ಶೇಖರ್ ಗೌಡ ಜಿ ರಾಮಾತ್ನಾಳ್ , ಡಾ ಕೆ.ಟಿ ತಿಪ್ಪೇಸ್ವಾಮಿ, ಎಸ್ ಮಂಜು, ಅಪರ್ಣ ಎಂ ಕೊಳ್ಳ, ಜಿಪಂ ಸಿಇಒ ಡಾ. ವೈ ನವೀನ್ ಭಟ್ ,ಅಪರ ಜಿಲ್ಲಾಧಿಕಾರಿ ಡಾ ಎನ್ ಭಾಸ್ಕರ್ ,ಡಿವೈ ಎಸ್ ಪಿ ಎಸ್.ಶಿವಕುಮಾರ್ಇ ದ್ದರು.