ಬಾಲ್ಯ ವಿವಾಹ ತಡೆದ ಮಕ್ಕಳ ರಕ್ಷಣಾ ಜಿಲ್ಲಾ ಘಟಕ

| Published : Aug 29 2025, 01:00 AM IST

ಸಾರಾಂಶ

ಪಟ್ಟಣದ ಪಂಚಾಯತಿ ವ್ಯಾಪ್ತಿಯ ಪೌರ ಕಾರ್ಮಿಕ ಕಾಲೋನಿಯ ಅಪ್ರಾಪ್ತೆಯ ಬಾಲಕಿಯ ಜೊತೆ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಮಕ್ಕಳ ರಕ್ಷಣಾ ಜಿಲ್ಲಾ ಘಟಕದ ಸಂಯೋಜಕ ಮಹೇಶ್ ನೇತೃತ್ವದ ತಂಡ ಯಶಸ್ವಿಯಾಗಿದೆ.

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣದ ಪಂಚಾಯತಿ ವ್ಯಾಪ್ತಿಯ ಪೌರ ಕಾರ್ಮಿಕ ಕಾಲೋನಿಯ ಅಪ್ರಾಪ್ತೆಯ ಬಾಲಕಿಯ ಜೊತೆ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಮಕ್ಕಳ ರಕ್ಷಣಾ ಜಿಲ್ಲಾ ಘಟಕದ ಸಂಯೋಜಕ ಮಹೇಶ್ ನೇತೃತ್ವದ ತಂಡ ಯಶಸ್ವಿಯಾಗಿದೆ.

ಪಟ್ಟಣದ ಪೌರ ಕಾರ್ಮಿಕ ಕಾಲೋನಿಯ 2ನೇ ವಾರ್ಡಿನ ಅಪ್ರಾಪ್ತ ಬಾಲಕಿ ಹಾಗೂ ಗುಂಡ್ಲುಪೇಟೆ ಪಟ್ಟಣದ ವಿನೋದ್ ಎಂಬಾತನಿಗೆ ಮೂರು ತಿಂಗಳ ಹಿಂದೆಯೇ ಮದುವೆಗೆ ನಿಶ್ಚಯ ಮಾಡಲಾಗಿತ್ತು.

ಆಗಸ್ಟ್ 29 ರಂದು ತಮಿಳುನಾಡಿನ ಬಣ್ಣಾರಿ ದೇವಾಲಯದಲ್ಲಿ ವಿವಾಹ ಮಾಡಲು ಕುಟುಂಬಸ್ಥರು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಆದರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಾಯವಾಣಿ ೧೦೯೮ ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ ದೂರು ನೀಡಿದ್ದ ಹಿನ್ನೆಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯೋಜಕ ಮಹೇಶ್ ನೇತೃತ್ವದಲ್ಲಿ ಅಪ್ರಾಪ್ತೆಯ ಮನೆಗೆ ಭೇಟಿ ನೀಡಿದ್ದರು. ಅಪ್ರಾಪ್ತೆ ಬಾಲಕಿ ಹಾಗೂ ಕುಟುಂಬಸ್ಥರಿಂದ ಅಗತ್ಯ ಮಾಹಿತಿ ಪಡೆದುಕೊಂಡು 18 ವರ್ಷ ತುಂಬುವವರೆಗೆ ಯಾವುದೇ ಕಾರಣಕ್ಕೂ ಮದುವೆ ಮಾಡಬಾರದು. ನಿಯಮ ಬಾಹಿರವಾಗಿ ಮದುವೆ ಮಾಡಿದರೆ ಎಲ್ಲರ ವಿರುದ್ಧ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಅಪ್ರಾಪ್ತ ಬಾಲಕಿಯನ್ನು ಚಾಮರಾಜನಗರದ ಸಾಂತ್ವನ ಕೇಂದ್ರದಲ್ಲಿ ಸಮಾಲೋಚನೆ ನಡೆಸಲು ಕುಟುಂಬಸ್ಥರ ಜೊತೆ ಕರೆದೊಯ್ದರು.

ಈ ವೇಳೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಗೌಜಿಯಾ, ರಾಜಸ್ವ ನಿರೀಕ್ಷಕ ಶೇಷಣ್ಣ , ಬಿಸಿಎಂ ಇಲಾಖೆಯ ಸುನೀಲ್ ಕುಮಾರ್, ಎ ಎಸ್ ಐ ಹೂವಯ್ಯ, ಮಹಿಳಾಪೇದೆ ರಂಜಿತ, ಅಂಗನವಾಡಿ ಕಾರ್ಯಕರ್ತೆ ನಾಗರತ್ನ, ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಸುಧಾ, ಆಶಾ ಕಾರ್ಯಕರ್ತೆ ಮಂಜುಳಾ, ಹನೂರು ಪಟ್ಟಣದ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಧರ್ಮಲಿಂಗಂ ಹಾಜರಿದ್ದರು.