ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ ಅವರು ತಾಲೂಕಿನ ವಿವಿಧ ಪ್ರೌಢಶಾಲೆಗಳು ಹಾಗೂ ಅಂಗವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.

ಸವಣೂರು: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ ಅವರು ತಾಲೂಕಿನ ವಿವಿಧ ಪ್ರೌಢಶಾಲೆಗಳು ಹಾಗೂ ಅಂಗವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.

ಶಾಲೆಗಳ ಮೂಲಸೌಕರ್ಯ, ಮಕ್ಕಳ ಸುರಕ್ಷತೆ, ಪೌಷ್ಟಿಕ ಆಹಾರ ವಿತರಣೆ, ಹಾಜರಾತಿ ಹಾಗೂ ಕಲಿಕಾ ವಾತಾವರಣ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಸಲಹೆಗಳನ್ನು ನೀಡಿದರು.ನಂತರ ಪಟ್ಟಣದ ಎಸ್.ಎಫ್.ಎಸ್. ಪ್ರೌಢಶಾಲೆಯ ಸಭಾಂಗಣದಲ್ಲಿ ಮಕ್ಕಳ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾವೇರಿ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಪೋಕ್ಸೋ ಕಾಯ್ದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಕಾಯ್ದೆ, ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಗಳ ಕುರಿತು ಮಕ್ಕಳಿಗೆ ವಿವರವಾದ ಮಾಹಿತಿ ನೀಡಿ ಅರಿವು ಮೂಡಿಸಲಾಯಿತು. ವಿಶೇಷವಾಗಿ ಬಾಲ್ಯವಿವಾಹ ಮಾತ್ರವಲ್ಲದೆ ಅಪ್ರಾಪ್ತ ಬಾಲಕಿಯರ ನಿಶ್ಚಿತಾರ್ಥವೂ ಸಹ ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಇದಕ್ಕೆ ಶಿಕ್ಷೆಯ ವ್ಯವಸ್ಥೆಯಿದೆ ಎಂದು ಮಕ್ಕಳಿಗೆ ಸ್ಪಷ್ಟಪಡಿಸಲಾಯಿತು. ಯಾವುದೇ ರೀತಿಯ ಕಿರುಕುಳ, ದೌರ್ಜನ್ಯ ಅಥವಾ ಹಕ್ಕುಲಂಘನೆ ಸಂಭವಿಸಿದರೆ ತಕ್ಷಣವೇ ಶಿಕ್ಷಕರು, ಪಾಲಕರು ಅಥವಾ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡುವಂತೆ ಮಕ್ಕಳಿಗೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳ ಸಾರಿಗೆ ಸಮಸ್ಯೆಗಳ ಬಗ್ಗೆ ಗಮನಹರಿಸಿ, ನಿಗದಿತ ಸಮಯಕ್ಕೆ ಬಸ್ ಪೂರೈಕೆಯಾಗುವಂತೆ ಹಾಗೂ ಬಸ್‌ಗಳಲ್ಲಿ ಕಿಡಿಗೇಡಿಗಳಿಂದಾಗುವ ಕಿರುಕುಳ ತಡೆಗಟ್ಟಲು ಸಾರಿಗೆ ಹಾಗೂ ಪೊಲೀಸ್ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಯೋಗದ ಸದಸ್ಯರು ಸೂಚಿಸಿದರು.

ತಹಸೀಲ್ದಾರ್ ರವಿಕುಮಾರ್ ಕೊರವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂವಾದ ಕಾರ್ಯಕ್ರಮದಲ್ಲಿ ತಾಲೂಕಿನ 37 ಶಾಲೆಯ 188 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮೋಹನ್ ದಂಡಿನ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಬಾರ್ಕಿ, ಪಿಎಸ್‌ಐ ರಂಗನಾಥ ಅಂತರಗಟ್ಟಿ, ಪ್ರೌಢಶಾಲೆಯ ಪ್ರಾಂಶುಪಾಲ ಫಾದರ್ ವಿಕ್ಟರ್ ಕುಜುರ್ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಪಾಲ್ಗೊಂಡಿದ್ದರು. ಶಿಕ್ಷಕರಾದ ನಾಗರಾಜ ಬಂಡಿವಡ್ಡರ ಕಾರ್ಯಕ್ರಮ ನಿರ್ವಹಿಸಿದರು.