ಸಾರಾಂಶ
ಪೋಷಕರು ಕಡಿಮೆ ಅಂಕ ಬಂದಿದ್ದರಿಂದ ಮಗಳು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ತಿಳಿಸಿದ್ದಾರೆ. ಆದರೆ, ವಿದ್ಯಾರ್ಥಿನಿ ಕಲಿಯುತ್ತಿದ್ದ ಎಸ್‌ಎಫ್‌ಎಸ್ ಶಾಲೆಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಸಿಬ್ಬಂದಿ ವಿಚಾರಿಸಿದಾಗ, ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ನಕಲು ಮಾಡಿರುವುದು ತಿಳಿದುಬಂದಿದೆ.
ಕೊಪ್ಪಳ:
ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿವೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿನಿ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಭೇಟಿ ನೀಡಿ, ಪಾಲಕರಿಗೆ ಸಾಂತ್ವನ ಹೇಳಿದರು.ಈ ಕುರಿತು ಕನ್ನಡಪ್ರಭ ಪ್ರಕಟಿಸಿದ ವರದಿ ಗಮನಿಸಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು, ಮೃತ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪೋಷಕರು ಕಡಿಮೆ ಅಂಕ ಬಂದಿದ್ದರಿಂದ ಮಗಳು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ತಿಳಿಸಿದ್ದಾರೆ. ಆದರೆ, ವಿದ್ಯಾರ್ಥಿನಿ ಕಲಿಯುತ್ತಿದ್ದ ಎಸ್‌ಎಫ್‌ಎಸ್ ಶಾಲೆಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಸಿಬ್ಬಂದಿ ವಿಚಾರಿಸಿದಾಗ, ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ನಕಲು ಮಾಡಿರುವುದು ತಿಳಿದುಬಂದಿದೆ. ಈ ಕುರಿತು ಪಾಲಕರನ್ನು ಕರೆಸಿ ಈ ರೀತಿ ಪುನರರಾವರ್ತನೆ ಆಗದಂತೆ ತಿಳಿವಳಿಕೆ ನೀಡಿದ್ದೇವೆ ಎಂದು ಶಿಕ್ಷಕರು ಹೇಳುತ್ತಾರೆ. ಆದರೆ, ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳಲು ಉತ್ತೇಜನ ಹಾಗೂ ಅವಹೇಳನ ಮಾಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಸಂಬಂಧಿಸಿದ 8ನೇ ವರ್ಗದ ಶಿಕ್ಷಕರು, ಪರೀಕ್ಷಾ ಮೇಲ್ವಿಚಾರಕರು, ಸಂಸ್ಥೆ ಹಾಗೂ ಆಡಳಿತ ಮಂಡಳಿ ವಿರುದ್ಧ ಕ್ರಮ ಜರುಗಿಸಲು ಹಾಜರಿದ್ದ ಪೊಲೀಸ್ ನಿರೀಕ್ಷಕರಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಶಿಫಾರಸು ಮಾಡಿದ್ದಾರೆ. ಜತೆಗೆ ಈ ಕುರಿತು ಆಯೋಗಕ್ಕೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಇದು ರಾಜ್ಯ ಪಠ್ಯಕ್ರಮದ ಶಾಲೆ ಆಗಿರುವುದರಿಂದ ಶಿಕ್ಷಣ ಇಲಾಖೆಯ ನಿಯಮಾವಳಿಗಳಂತೆ ಕಾರ್ಯನಿರ್ವಹಿಸಬೇಕು. ಪರೀಕ್ಷಾ ಫಲಿತಾಂಶ ಪ್ರಕಟಿಸಲು ಏ. 9ರ ವರೆಗೆ ಕಾಲಾವಕಾಶ ಇದ್ದರೂ ಸಹ ಮಾ. 26ರಂದೇ ಫಲಿತಾಂಶ ಪ್ರಕಟಿಸಲಾಗಿದೆ. ಈ ಮೂಲಕ ಶಿಕ್ಷಣ ಇಲಾಖೆಯ ನಿಯಮಾವಳಿಯಂತೆ ಕಾರ್ಯನಿರ್ವಹಿಸದೆ ಇರುವ ಸಂಸ್ಥೆ, ಆಡಳಿತ ಮಂಡಳಿ ವಿರುದ್ಧ ಕ್ರಮ ಜರುಗಿಸುವಂತೆ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು. ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಇಂತಹ ಘಟನೆ ಮರುಕಳಿಸದಂತೆ ಶಿಕ್ಷಣ ಸಂಸ್ಥೆಗಳು, ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕೆಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಸೂಚಿಸಿದ್ದಾರೆ.
ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ ಹಾಜರಿದ್ದರು.