ಕೊಟ್ಟೂರು: ಶಾಲಾ ಕಾಲೇಜಿನವರು ಮಕ್ಕಳ ಸುರಕ್ಷತೆಯನ್ನು ಅಧ್ಯಯತೆಯನ್ನಾಗಿ ಪರಿಗಣಿಸಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡರೆ ಮಾತ್ರ ತಮ್ಮ ಪ್ರತಿಷ್ಠೆ ಗೌರವಕ್ಕೆ ಮತ್ತಷ್ಟು ಮೆರಗು ಬರಲಿದೆ ಎಂದು ಕೂಡ್ಲಿಗಿ ಪೊಲೀಸ್ ಉಪವಿಭಾಗದ ಡಿ.ವೈ.ಎಸ್.ಪಿ ಮಲ್ಲೇಶ ದೊಡ್ಮನಿ ಹೇಳಿದರು.
ಇಲ್ಲಿನ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಕಾರ್ಯಾಲಯದಲ್ಲಿ ಶನಿವಾರ ನಡೆಸಿದ ಶಾಲಾ ಕಾಲೇಜುಗಳ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಮುಖ್ಯೋಪಾಧ್ಯಯರು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಶಾಲಾ ಕಾಲೇಜುಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಮತ್ತು ಈ ಬಗ್ಗೆ ಸಂಶಯದ ಮಾಹಿತಿ ಗೊತ್ತಾಗುತ್ತಿರುವಂತೆಯೇ ಕೂಡಲೇ ಪೊಲೀಸ್ ಠಾಣೆಗೆ ದೂರು ದಾಖಲಿಸಬೇಕು, ಹೊರತು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಬಾರದು ಎಂದು ಅವರು ಸೂಚಿಸಿದರು.2012ರಲ್ಲಿ ಸರ್ಕಾರ ಜಾರಿಗೆ ತಂದಿರುವ ಪೋಕ್ಸೋ ಕಾಯ್ದೆ ಗಂಭೀರವಾದ ಕಾಯ್ದೆಯಾಗಿದ್ದು ಈ ಪ್ರಕರಣದಡಿ ಯಾವುದೇ ಘಟನೆಗಳು ನಡೆಯದಂತೆ ತುರ್ತು ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಶಾಲಾ ಕಾಲೇಜ್ ಶಿಕ್ಷಣ ಸಂಸ್ಥೆಗಳವರು, ತಮ್ಮ ಸಿಬ್ಬಂದಿ ಮತ್ತು ವಾಹನ ಚಾಲಕರ ಪೂರ್ವಾಪರ ಮಾಹಿತಿಯನ್ನು ಸಂಗ್ರಹಿಸಿಕೊಂಡು ನೇಮಕ ಮಾಡಿಕೊಳ್ಳಬೇಕು. ಯಾವುದೇ ಹಂತದಲ್ಲಿ ಶಾಲೆಗಳಿಂದ ಮಕ್ಕಳಿಗೆ ದೌರ್ಜನ್ಯ ಆಗದಂತೆ ಗಮನ ಹರಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ ಬೇವೂರು ಮಾತನಾಡಿ ಶಾಲಾ ಸಂಸ್ಥೆಗಳಿಗೆ ಸರ್ಕಾರದಿಂದ ಮಕ್ಕಳ ಸುರಕ್ಷತೆಗೆ ಬಗ್ಗೆ ಅಗತ್ಯವಾಗಿ ಕ್ರಮ ಕೈಗೊಳ್ಳುವ ಕುರಿತು ಪ್ರತ್ಯೇಕ ಗೈಡ್ ಲೈನ್ಸ್ ನ್ನು ರೂಪಿಸಲಾಗಿದ್ದು ಇದರ ಜೊತೆಗೆ ಈ ನಿಟ್ಟಿನಲ್ಲಿ ಯಾವ ರೀತಿ ಮಕ್ಕಳೊಂದಿಗೆ ಇರಬೇಕೆನ್ನುವ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಅದರಂತೆ ಕಡ್ಡಾಯವಾಗಿ ಸಂಸ್ಥೆಗಳವರು ನಡೆದುಕೊಳ್ಳಬೇಕು ಎಂದರು.ತಹಶೀಲ್ದಾರ್ ಅಮರೀಶ ಜಿ.ಕೆ. ಮಾತನಾಡಿ ಶಿಕ್ಷಣ ಸಂಸ್ಥೆಗಳವರು ಶಾಲೆಗೆ ಪ್ರವೇಶ ಪಡೆದ ದಿನದಿಂದ ಮಕ್ಕಳ ಸುರಕ್ಷತೆಗೆ ತೊಂದರೆಯಾಗದಂತೆ ಅಧ್ಯತೆಯ ಕಾಳಜಿಯನ್ನು ವಹಿಸಬೇಕು ಎಂದರು.
ಸಿ.ಡಿ.ಪಿ.ಓ ಕಛೇರಿಯ ವಿಜಯಲಕ್ಷ್ಮೀ ಮಾತನಾಡಿ ಮಕ್ಕಳ ಅ ಸುರಕ್ಷತೆ ಅಭಿವೃದ್ದಿಯ ಎಲ್ಲಾ ಕಾರ್ಯಗಳನ್ನು ಬುಡಮೇಲುಗೊಳಿಸುವ ಸಂಭವವಿದ್ದು ಯಾವುದೇ ಕಾರಣಕ್ಕೂ ತಪ್ಪುಗಳು ಆಗದಂತೆ ಪ್ರತಿ ಹಂತದಲ್ಲೂ ಗಮನಿಸಬೇಕು ಎಂದರು.
ಸಿಪಿಐ ಡಿ.ಮುರುಗಪ್ಪ ಮಾತನಾಡಿ ಶಾಲಾ ಕಾಲೇಜುಗಳಲ್ಲಿ ಕಡ್ಡಾವಾಗಿ ಸಿಸಿ ಕ್ಯಾಮೇರಾಗಳನ್ನು ಅಳವಡಿಸಬೇಕು ಪೋಕ್ಸೋ ಕಾಯ್ದೆಯ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮ ನಡೆಸಬೇಕು ಮಕ್ಕಳ ಮೇಲಿನ ದೌರ್ಜನ್ಯ ಶಿಕ್ಷಾರ್ಹ ಅಪರಾಧವಾಗಿದ್ದು ಇಂತಹ ಘಟನೆಗಳು ನಡೆದಲ್ಲಿ ಆಡಳಿತ ಮಂಡಳಿಯು ಹೊಣೆಯಾಗಬೇಕಾದ ಸಂದರ್ಭ ಉಂಟಾಗಲಿದ್ದು ಈ ಬಗ್ಗೆ ಸಂಸ್ಥೆಯವರು ಸದಾ ಕಟ್ಟೆಚ್ಚರದಿಂದ ಇರಬೇಕು.
ಶಾಲಾ ಸಂಸ್ಥೆಗಳ ಪರವಾಗಿ ಸಾವಜ್ಜಿ ರಾಜೇಂದ್ರ ಪ್ರಸಾದ್, ಹೆಚ್.ಎನ್.ವೀರಭದ್ರಪ್ಪ ಮಾತನಾಡಿ ಪೊಲೀಸ್ ಅಧಿಕಾರಿಗಳೊಂದಿಗೆ ಸದಾ ಸಂಪರ್ಕದಲ್ಲಿರಲು ಸಹಕರಿಸುತ್ತೇವೆ ಎಂದರು.ಸಭೆಯಲ್ಲಿ ಶಾಲಾ ಸಂಸ್ಥೆಗಳ ಮುಖ್ಯಸ್ಥರುಗಳಾದ ಬಿ.ಪಂಪಾಪತಿ, ಪಿ.ಶ್ರೀಧರ ಶೆಟ್ಟಿ, ಎಂ.ಎಂ.ಜೆ. ಶೋಬಿತ್, ಡಾ.ಜೆ.ಬಸವರಾಜ, ಪ್ರೋಭೆಷನರಿ ಪಿ.ಎಸ್.ಐ. ಶರಣಪ್ಪ ಮತ್ತಿತರರು ಭಾಗವಹಿಸಿದ್ದರು.
ಪಿ.ಎಸ್.ಐ. ಗೀತಾಂಜಲಿ ಶಿಂಧೆ ವಂದಿಸಿದರು.