ಭಟ್ಕಳದ ಹೆಗ್ಗದ್ದೆಯಲ್ಲಿ ನಾಟಿ ವೈದ್ಯ ಕರಿಯಾ ಗೊಂಡ ಅವರಿಗೆ ಡಾ. ಆರ್.ವಿ. ಸರಾಫ್ ಸಂಸ್ಮರಣಾ ಪ್ರಶಸ್ತಿ ಪ್ರದಾನಕನ್ನಡಪ್ರಭ ವಾರ್ತೆ ಭಟ್ಕಳ

ಶಿರಾಲಿಯ ಡಾ. ಆರ್.ವಿ. ಸರಾಫ್ ಅಭಿಮಾನಿ ಬಳಗದಿಂದ ಕೊಡಮಾಡುವ ಡಾ. ಆರ್.ವಿ. ಸರಾಫ್ ಸಂಸ್ಮರಣಾ ಪ್ರಶಸ್ತಿಯನ್ನು ಕಟಗಾರಕೊಪ್ಪದ ಹೆಗ್ಗದ್ದೆಯ ನಾಟಿ ವೈದ್ಯ ಕರಿಯಾ ಗೊಯ್ದ ಗೊಂಡರಿಗೆ ಅವರ ಮನೆಗೆ ಭೇಟಿ ನೀಡಿ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆ, ನಾಟಿ ವೈದ್ಯ ಪದ್ಧತಿ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಹೆಗ್ಗದ್ದೆಯ ಕರಿಯಾ ಗೊಂಡ ಅವರು ತಮ್ಮ ತಲೆಮಾರುಗಳಿಂದ ಬಂದ ನಾಟಿ ವೈದ್ಯ ಪದ್ದತಿಯನ್ನು ಮುಂದುವರಿಸಿಕೊಂಡು ಬಂದು ಹಲವು ಕಾಯಿಲೆಗಳಿಗೆ ಔಷಧ ನೀಡಿ ಗುಣಪಡಿಸುತ್ತಿರುವುದು ಶ್ಲಾಘನೀಯ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಾಟಿ ವೈದ್ಯರಾಗಿ ಕೆಲಸ ಮಾಡುವ ಇವರಿಗೆ ಡಾ. ಆರ್.ವಿ. ಸರಾಫ್‌ ಸಂಸ್ಮರಣಾ ಪ್ರಶಸ್ತಿ ನೀಡಿರುವುದು ಅರ್ಥಪೂರ್ಣವಾಗಿದೆ. ನಮ್ಮ ನಾಟಿ ವೈದ್ಯ ಪದ್ದತಿ, ಜನಪದ ಕಲೆ, ಸಂಸ್ಕೃತಿ ಉಳಿಸಿ, ಬೆಳೆಸಬೇಕು. ನಾಟಿ ವೈದ್ಯ ಪದ್ಧತಿಯನ್ನು ನಿಮ್ಮ ಮಕ್ಕಳಿಗೂ ಕಲಿಸಿ ಅವರು ಮುಂದುವರಿಸಿಕೊಂಡು ಹೋಗುವಂತೆ ಆಗಬೇಕು ಎಂದರು.

ಡಾ. ಸರಾಫರ ಮಾನವೀಯ ಮೌಲ್ಯ ಮತ್ತು ಕರಿಯ ಗೊಂಡ ಅವರ ನಾಟಿ ವೈದ್ಯ ಪದ್ಧತಿ ಎರಡನ್ನೂ ಗೌರವಿಸಿದಂತಾಗಿದೆ. ಪಾರಂಪರಿಕ ವೈದ್ಯ ಪದ್ದತಿ ತನ್ನದೇ ಮಹತ್ವ ಹೊಂದಿದೆ ಎಂದರು.

ಪ್ರಶಸ್ತಿ ವಿತರಿಸಿ ಮಾತನಾಡಿದ ಸಾಹಿತಿ ಮಾನಾಸುತ ಶಂಭು ಹೆಗಡೆ, ಸಾಹಿತ್ಯಕ್ಕೆ ನೋವು ಮರೆಸುವ ಶಕ್ತಿ ಇದೆ. ಸರಾಫ ಕುಟುಂಬದಿಂದ ಗ್ರಾಮೀಣ ಭಾಗದ ನಾಟಿ ವೈದ್ಯರೊಬ್ಬರನ್ನು ಗುರುತಿಸಿ ಸನ್ಮಾನಿಸಿ ಪ್ರಶಸ್ತಿ ಕೊಟ್ಟು ಉತ್ತಮ ಕಾರ್ಯ ಮಾಡಿದಂತಾಗಿದೆ ಎಂದರು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕರಿಯಾ ಗೊಂಡ, ನಾನು ಹಣಕ್ಕಾಗಿ ನಾಟಿ ವೈದ್ಯ ಕೆಲಸ ಮಾಡುತ್ತಿಲ್ಲ. ನಮ್ಮ ಪೂರ್ವಜರ ಕಾಲದಿಂದಲೂ ನಡೆಸಿಕೊಂಡು ಬಂದ ಪದ್ಧತಿಯನ್ನು ಮುಂದುವರಿಸಿದ್ದೇನೆ. ನಾನು ಕೊಡುವ ನಾಟಿ ಔಷಧಿಯಿಂದ ಗುಣವಾದರೆ ಅದುವೇ ನನಗೆ ತೃಪ್ತಿ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಆರೆನ್ನೆಸ್ ಪಾಲಿಟೆಕ್ನಿಕ್‌ನ ನಿವೃತ್ತ ಪ್ರಾಚಾಯ ಎಂ.ವಿ. ಹೆಗಡೆ, ಹೊನ್ನಾವರ ಪ್ರೌಢಶಾಲೆ ಮುಖ್ಯ ಶಿಕ್ಷಕರ ಸುರೇಶ ನಾಯಕ, ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಉಪನ್ಯಾಸಕ ರಾಮ ಗೊಂಡ ಮಾತನಾಡಿದರು.

ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಂ. ಗೊಂಡ ಮುಂತಾದವರಿದ್ದರು. ಡಾ. ಆರ್.ವಿ. ಸರಾಫ ಅಭಿಮಾನಿ ಬಳಗದ ಅಧ್ಯಕ್ಷ ಪಿ.ಆರ್. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಶ್ರೀಧರ ಶೇಟ್ ಸ್ವಾಗತಿಸಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ವಂದಿಸಿದರು. ಮನೆಯಂಗಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಊರ ಗ್ರಾಮಸ್ಥರು ಪಾಲ್ಗೊಂಡಿದ್ದರು.