ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಂ ಸಭಾಂಗಣದಲ್ಲಿ ಅಪ್ರಾಪ್ತ ವಯಸ್ಕರ ವಿವಾಹ ತಡೆ ಹಾಗೂ ಪೋಕ್ಸೋ ಕಾಯಿದೆ ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

ಕುಷ್ಟಗಿ: ಮಕ್ಕಳ ಮೇಲಾಗುವ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯವೂ ಶಿಕ್ಷಾರ್ಹ ಅಪರಾಧವಾಗಿದೆ. ಅಂತಹ ತಪ್ಪುಗಳು ಸಂಭವಿಸಿದೆ ಎಂದು ಗೊತ್ತಾದ ಕೂಡಲೇ ಮಕ್ಕಳು ತಮ್ಮ ಪಾಲಕರಿಗೆ ಅಥವಾ ಪೋಷಕರ ಗಮನಕ್ಕೆ ತಂದು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬಹುದು ಎಂದು ಜಿಲ್ಲಾ ಸೆಷನ್‌ ನ್ಯಾಯಾಧೀಶ ಶಶಿಧರ ಶೆಟ್ಟಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಸಹಯೋಗದಲ್ಲಿ ಅಪ್ರಾಪ್ತ ವಯಸ್ಕರ ವಿವಾಹ ತಡೆ ಹಾಗೂ ಪೋಕ್ಸೋ ಕಾಯಿದೆ ಕುರಿತು ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದಕ್ಕಾಗಿಯೇ ಕೇಂದ್ರ ಸರ್ಕಾರ 2012ರಲ್ಲಿ ಪೋಕ್ಸೋ ಕಾಯ್ದೆ ಜಾರಿಗೆ ತಂದಿದೆ. ಈ ಮೂಲಕ ಅಪ್ರಾಪ್ತ ವಯಸ್ಕರ ಮೇಲೆ ಆಗುವ ಲೈಂಗಿಕ ದೌರ್ಜನ್ಯಕ್ಕೆ ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ವಿಧಿಸುವ ಅವಕಾಶವಿದೆ. ಮಕ್ಕಳು ಇಂತಹ ಕಾಯ್ದೆ ಬಗ್ಗೆ ಅರಿತು ತಮ್ಮ ಮೇಲಾಗುವ ದೌರ್ಜನ್ಯ ತಡೆಗಟ್ಟಿದರೆ ಸಮಾಜದಲ್ಲಿ ಬದಲಾವಣೆ ಸಾಧ್ಯವಿದೆ ಎಂದರು.

ಜನನ ಹಾಗೂ ಮರಣವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಒಂದು ವರ್ಷದೊಳಗೆ ನೋಂದಣಿಯಾಗದೆ ಇದ್ದರೆ ನ್ಯಾಯಾಲಯದಲ್ಲಿ ಪಡೆಯಬೇಕಾಗುತ್ತದೆ. ಕಾನೂನೂ ಪಾಲನೆಯ ಜೊತೆಗೆ ಭ್ರಷ್ಟಾಚಾರ ನಿಯಂತ್ರಣ ಮಾಡುವಲ್ಲಿ ಮುಖ್ಯಪಾತ್ರ ವಹಿಸಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಎಚ್.ಆರ್. ನಾಯಕ ಮಾತನಾಡಿ, ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ಪಾಲಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.

ಕೊಪ್ಪಳ ವಿವಿ ಕುಲಸಚಿವ ಡಾ. ಎಸ್.ವಿ. ಡಾಣಿ ಅಧ್ಯಕ್ಷತೆ ವಹಿಸಿದ್ದರು. ಎಚ್ಆರ್‌ಸಿಎಫ್‌ ರಾಷ್ಟ್ರೀಯ ಅಧ್ಯಕ್ಷ ಮೋಹನರಾವ್‌ ನಾಲ್ವಡೆ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ, ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್‌. ಪೂಜೇರಿ, ಮಂಗಳೂರು ಕಾಯಂ ಜನತಾ ನ್ಯಾಯಾಲಯ ಅಧ್ಯಕ್ಷ ಜಯಶಂಕರ, ಗ್ರೇಡ್- 2 ತಹಸೀಲ್ದಾರ್ ರಜನಿಕಾಂತ, ಬಿಇಒ ಉಮಾದೇವಿ ಬಸಾಪುರು, ಸಿಡಿಪಿಒ ಯಲ್ಲಮ್ಮ ಹಂಡಿ, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಕಾರ್ಯದರ್ಶಿ ಡಾ. ಕೆ. ಶ್ರೀನಿವಾಸ ಇದ್ದರು. ಶಿಕ್ಷಕ ಜೀವನಸಾಬ ಬಿನ್ನಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.