ಕಲುಷಿತ ಕೇಕ್ ತಿಂದು ಮಗು ಅಸ್ವಸ್ಥ: ಪೋಷಕರ ದೂರು

| Published : Jul 23 2025, 03:23 AM IST

ಸಾರಾಂಶ

ಕಲುಷಿತ ಪೇಸ್ಟಿ ಕೇಕ್ ತಿಂದು ಮಗು ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ ಪೋಷಕರು ನೀಡಿದ ದೂರಿನನ್ವಯ ನಾಗಮಂಗಲ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಕಾವೇರಿ ಬೇಕರಿ ಮಾಲೀಕರಿಗೆ ಪುರಸಭೆ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿ ಬೀಗಮುದ್ರೆ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕಲುಷಿತ ಪೇಸ್ಟಿ ಕೇಕ್ ತಿಂದು ಮಗು ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ ಪೋಷಕರು ನೀಡಿದ ದೂರಿನನ್ವಯ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಕಾವೇರಿ ಬೇಕರಿ ಮಾಲೀಕರಿಗೆ ಪುರಸಭೆ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿ ಬೀಗಮುದ್ರೆ ಹಾಕಿದ್ದಾರೆ.

ಪಟ್ಟಣದ ಆನಂದ್ ಎಂಬುವರು ಭಾನುವಾರ ಸಂಜೆ ಕಾವೇರಿ ಬೇಕರಿಯಲ್ಲಿ ಐಸ್ ಕೇಕ್ ತಂದು ಮಗುವಿಗೆ ತಿನ್ನಿಸಿದ್ದರು. ಕೇಕ್ ತಿಂದ ಕೆಲವೇ ಕ್ಷಣದಲ್ಲಿ ಮಗು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಮಗುವನ್ನು ಪರೀಕ್ಷಿಸಿದ ವೈದ್ಯರು ಫುಡ್‌ ಪಾಯಿಸನ್‌ನಿಂದ ಈ ರೀತಿ ಆಗಿದೆ ಎಂದು ತಿಳಿಸಿದ್ದರು.

ನಂತರ ಮನೆಗೆ ಬಂದು ತಾವು ಬೇಕರಿಯಿಂದ ತಂದಿದ್ದ ಕೇಕನ್ನು ಪರೀಕ್ಷಿಸಿದಾಗ ದುರ್ವಾಸನೆಯಿಂದ ಕೂಡಿದ್ದ ಕೇಕ್‌ನಲ್ಲಿ ಹುಳುಗಳು ಪತ್ತೆಯಾಗಿವೆ. ಇದನ್ನು ಕಂಡು ಆಕ್ರೋಶಗೊಂಡ ಆನಂದ್ ಸ್ನೇಹಿತರ ಜೊತೆಗೂಡಿ ಬೇಕರಿಗೆ ತೆರಳಿ ಮಾಲೀಕರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡು ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಅವರ ನಿರ್ದೇಶನದ ಮೇರೆಗೆ ಕಾವೇರಿ ಬೇಕರಿಗೆ ಭೇಟಿಕೊಟ್ಟ ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ನಿಂಗೇಗೌಡ ಮತ್ತು ಮಹೇಶ್ ಅವರು ಅವ್ಯವಸ್ಥೆಯಿಂದ ಕೂಡಿದ್ದ ಪದಾರ್ಥಗಳನ್ನು ತಯಾರಿಸುವ ಕೊಠಡಿ, ಎಲ್ಲೆಂದರಲ್ಲಿ ಬಿದ್ದು ಚೆಲ್ಲಾಡುತ್ತಿದ್ದ ಆಹಾರ ಪದಾರ್ಥಗಳು, ಕೊಳೆತು ನಾರುತ್ತಿದ್ದ ಕೇಕ್ ಮೇಲೆ ಸಿಂಪಡಿಸುವ ಕಲರ್ ಮತ್ತು ಕ್ರೀಮ್, ತಿಂಡಿ-ತಿನಿಸು ತಯಾರಿಸುವ ಕಿಚನ್ ಕೊಠಡಿಯನ್ನು ಕಂಡು ದಂಗಾಗದರು.

ಈ ಕುರಿತು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದವರನ್ನು ಪ್ರಶ್ನಿಸಿದಾಗ ಬೇಕರಿಯನ್ನು ಖಾಲಿ ಮಾಡುತ್ತಿರುವುದಾಗಿ ಸಬೂಬು ಹೇಳಿದ್ದಾರೆ.

ಬೇಕರಿ ತಿಂಡಿ-ತಿನಿಸುಗಳನ್ನು ತಯಾರಿಸುವ ಕೊಠಡಿ ಅಶುಚಿತ್ವದಿಂದ ಕೂಡಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾವೇರಿ ಬೇಕರಿಗೆ ಬೀಗ ಮುದ್ರೆ ಹಾಕಿದರು.

ಪಟ್ಟಣದ ಟಿ.ಬಿ.ಬಡಾವಣೆಯ ಬಡಗೂಡಮ್ಮ ದೇವಸ್ಥಾನದ ಮುಂಭಾಗದ ಮತ್ತೊಂದು ಶಾಖೆ ಕಾವೇರಿ ಬೇಕರಿಗೆ ಭೇಟಿ ನೀಡಿದಾಗ ರೀತಿ ಅಶುಚಿತ್ವ ಮತ್ತು ವಾಯಿದೆ ಮುಗಿದುರುವ ಪದಾರ್ಥಗಳು ಕಂಡು ಬಂದ ಹಿನ್ನೆಲೆಯಲ್ಲಿ ಆ ಬೇಕರಿಯನ್ನೂ ಬಂದ್ ಮಾಡಿಸಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಮಂಗಳವಾರ ಬೆಳಗ್ಗೆ ಸ್ಥಳಕ್ಕಾಗಮಿಸಿದ ಆಹಾರ ಸುರಕ್ಷತಾ ಅಧಿಕಾರಿ ಬಸವರಾಜು ಎರಡೂ ಕಾವೇರಿ ಬೇಕರಿಗಳನ್ನು ಪರಿಶೀಲನೆ ನಡೆಸಿದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪಕ್ಕದ ಕಾವೇರಿ ಬೇಕರಿಯಲ್ಲಿದ್ದ ಕೇಕ್ ಮತ್ತು ಇನ್ನಿತರೆ ಪದಾರ್ಥಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೊಳಪಡಿಸಿ ಕಾವೇರಿ ಬೇಕರಿ ಮಾಲೀಕ ಕೆ.ಪಿ.ರವಿ ವಿರುದ್ಧ ದೂರು ದಾಖಲಿಸಿದ್ದಾರೆ.

ಟಿ.ಬಿ.ಬಡಾವಣೆ ಬಡಗೂಡಮ್ಮ ದೇವಸ್ಥಾನದ ಮುಂಭಾಗದ ಮತ್ತೊಂದು ಶಾಖೆಯ ಕಾವೇರಿ ಬೇಕರಿಯಲ್ಲಿನ ಕೇಕ್ ಸೇರಿದಂತೆ ತಿಂಡಿ ತಿನಿಸುಗಳು ಗುಣಮಟ್ಟದಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿ ಬಸವರಾಜು ತಿಳಿಸಿದ್ದಾರೆ.