ಹುಟ್ಟಿದ ವೇಳೆ ಕರುಳು ಹೊರ ಬಂದು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ನವಜಾತ ಶಿಶುವನ್ನು ಭಾನುವಾರ ಕೊಪ್ಪಳದಿಂದ ಹುಬ್ಬಳ್ಳಿ ಕೆಎಂಸಿಆರ್‌ಐಗೆ ಝೀರೋ ಟ್ರಾಫಿಕ್‌ನಲ್ಲಿ ಕರೆತಂದು ಚಿಕಿತ್ಸೆ ನೀಡಿದ್ದರೂ ಅದು ಫಲಿಸದೇ ಮಂಗಳವಾರ ಮೃತಪಟ್ಟಿದೆ.
ಹುಬ್ಬಳ್ಳಿ:
ಹುಟ್ಟಿದ ವೇಳೆ ಕರುಳು ಹೊರ ಬಂದು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ನವಜಾತ ಶಿಶುವನ್ನು ಭಾನುವಾರ ಕೊಪ್ಪಳದಿಂದ ಹುಬ್ಬಳ್ಳಿ ಕೆಎಂಸಿಆರ್‌ಐಗೆ ಝೀರೋ ಟ್ರಾಫಿಕ್‌ನಲ್ಲಿ ಕರೆತಂದು ಚಿಕಿತ್ಸೆ ನೀಡಿದ್ದರೂ ಅದು ಫಲಿಸದೇ ಮಂಗಳವಾರ ಮೃತಪಟ್ಟಿದೆ.ಕುಕನೂರ ತಾಲೂಕಿನ ಗುತ್ತೂರ ಗ್ರಾಮದ ಮಲ್ಲಪ್ಪ-ವಿಜಯಲಕ್ಷ್ಮೀ ದಂಪತಿಗೆ ಶನಿವಾರ ರಾತ್ರಿ ಕುಕನೂರ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಆದರೆ, ಜನನದ ಕ್ಷಣದಲ್ಲೇ ಮಗುವಿನ ಕರುಳುಗಳು ಸಂಪೂರ್ಣವಾಗಿ ಹೊರಗೆ ಬಂದಿದ್ದವು. ಪರಿಸ್ಥಿತಿ ಗಂಭೀರವಾಗಿರುವುದನ್ನು ಅರಿತ ವೈದ್ಯರು, ತುರ್ತು ಶಸ್ತ್ರಚಿಕಿತ್ಸೆ ಅಗತ್ಯವೆಂದು ತಿಳಿಸಿ, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸುವಂತೆ ಸೂಚಿಸಿದ್ದರು.
ಝೀರೋ ಟ್ರಾಫಿಕ್:ಮಗುವಿನ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ತಾಯಿ ಮತ್ತು ಶಿಶುವನ್ನು ಕೊಪ್ಪಳದಿಂದ ಹುಬ್ಬಳ್ಳಿಗೆ 5 ಆಂಬ್ಯುಲೆನ್ಸ್‌ಗಳ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಕರೆತರಲಾಯಿತು. ಹುಬ್ಬಳ್ಳಿ ಕೆಎಂಸಿಆರ್‌ಐಗೆ ಶಿಶುವನ್ನು ತಂದ ತಕ್ಷಣವೇ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ, ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲ ಸಾಧ್ಯ ಚಿಕಿತ್ಸೆಯನ್ನು ವೈದ್ಯರು ಕೈಗೊಂಡರು. ಮಗುವಿನ ಹೊಟ್ಟೆಯ ಮೇಲ್ಭಾಗದಲ್ಲಿ ಚರ್ಮ ಇಲ್ಲದೇ ಅಂಗಾಂಗಗಳು ಹೊರಭಾಗದಲ್ಲಿ ಬಂದು ಸೋಂಕು, ಗ್ಯಾಂಗ್ರಿನ್, ನಂಜು ತಗುಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ವೈದ್ಯರು ಸತತ ಚಿಕಿತ್ಸೆ ನೀಡಿದರೂ ಸಹ ಶಿಶು ಚಿಕಿತ್ಸೆ ಫಲಿಸದೆ ಮಂಗಳವಾರ ಕೊನೆಯುಸಿರೆಳೆದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.