ಮಕ್ಕಳು ಭೂಮಿಯಲ್ಲಿನ ಮಿನುಗುವ ನಕ್ಷತ್ರಗಳಿದ್ದಂತೆ

| Published : Dec 24 2024, 12:46 AM IST

ಸಾರಾಂಶ

ಚಾಮರಾಜನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಾಲೆಯಲ್ಲಿದೆ ಶಿಕ್ಷಣದ ಜತೆ ರಕ್ಷಣೆ’ ಶೀರ್ಷಿಕೆಯಡಿ ಆರ್.ಟಿ.ಇ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಕುರಿತ ಕಾರ್ಯಾಗಾರವನ್ನು ಎಸ್ಪಿ ಡಾ.ಬಿ.ಟಿ.ಕವಿತಾ ಅವರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅದಮ್ಯ ಚೈತನ್ಯವುಳ್ಳ ಭೂಮಿಯಲ್ಲಿರುವ ಮಿನುಗುವ ನಕ್ಷತ್ರದಂತಿರುವ ಮಕ್ಕಳ ರಕ್ಷಣೆ ಮಾಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ಅವರು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಪಂ, ಪೊಲೀಸ್, ಶಾಲಾ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ‘ಶಾಲೆಯಲ್ಲಿದೆ ಶಿಕ್ಷಣದ ಜತೆ ರಕ್ಷಣೆ’ ಶೀರ್ಷಿಕೆಯಡಿ ಆರ್.ಟಿ.ಇ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಭೂಮಿಯಲ್ಲಿನ ಮಿನುಗುವ ನಕ್ಷತ್ರಗಳಿದ್ದಂತೆ. ಪ್ರಸ್ತುತ ಶಾಲೆ, ಮನೆ, ಸಮಾಜದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಆಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಮಕ್ಕಳ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕಾದ ಅಗತ್ಯವಿದೆ. ಮಕ್ಕಳ ಸುರಕ್ಷತೆಯ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರು ಮಕ್ಕಳ ಪೋಷಣೆ ರಕ್ಷಣೆ ಬಗ್ಗೆ ಆದ್ಯತೆ ನೀಡಬೇಕಿದೆ ಎಂದರು.

ಹುಟ್ಟುವಾಗಲೇ ಮಕ್ಕಳಿಗೆ ಹಕ್ಕುಗಳು ಜತೆಯಾಗಿಯೇ ಬರುತ್ತವೆ. ಮಕ್ಕಳು ಸಹಜವಾಗಿ ಬಾಲ್ಯ ಅನುಭವಿಸಲು ಅವಕಾಶ ಕೊಡಬೇಕು. ದಾವಂತದಲ್ಲಿ ಮಕ್ಕಳನ್ನು ಸಹಜವಾಗಿ ಬೆಳೆಯಲು ಬಿಡಲಾಗುತ್ತಿಲ್ಲ. ಅವರ ಮೇಲೆ ಯಾವುದೇ ಒತ್ತಡ ಹೇರದೆ ಪೂರ್ಣ ಪ್ರಮಾಣದಲ್ಲಿ ಸಾಮರ್ಥ್ಯ ಅಭಿವೃದ್ಧಿ ಬೆಳವಣಿಗೆಯಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.

ಮಕ್ಕಳ ರಕ್ಷಣೆ ಬಗ್ಗೆ ಸಹಾನುಭೂತಿ ಹಾಗೂ ಸಕ್ರಿಯವಾಗಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಮುಗ್ಧ ಮನಸ್ಸಿನ ಮಕ್ಕಳ ಸ್ವಾತಂತ್ರ್ಯ ಹರಣವಾಗದಂತೆ ಜಾಗೃತರಾಗಿರಬೇಕು. ಯಾವುದೇ ಹಂತದಲ್ಲಿ ದೌರ್ಜನ್ಯ ಕಂಡುಬಂದಲ್ಲಿ ನೆರವಿಗೆ ಮುಂದಾಗಬೇಕೆಂದು ತಿಳಿಸಿದರು.

ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಕೇಂದ್ರೀಕೃತ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಿಂದ ಸಮಾಜದ ಅಭಿವೃದ್ಧಿಯಾಗಲಿದೆ ಎಂದರು. ಮಕ್ಕಳ ಹಕ್ಕು, ರಕ್ಷಣೆಗಾಗಿ ಇರುವ ಕಾನೂನು ಕಾಯ್ದೆಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಹೊರಡಿಸಲಾಗುವ ಆದೇಶಗಳು ಮಾರ್ಗಸೂಚಿಗಳನ್ನು ಪಾಲನೆ ಮಾಡಿದಾಗ ನಿರೀಕ್ಷಿತ ಪ್ರಗತಿ ಸಾಧ್ಯ. ಮಕ್ಕಳ ಸ್ನೇಹಿ ವಾತಾವರಣ ಮೂಡಿಸುವ ಕಾರ್ಯದಲ್ಲಿ ಜಿಲ್ಲೆ ಮಾದರಿಯಾಗಬೇಕು ಎಂದು ವೆಂಕಟೇಶ್ ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ ಅವರು ಮಾತನಾಡಿ, ಮಕ್ಕಳನ್ನು ಬಾಲ್ಯದಲ್ಲಿಯೇ ಸೂಕ್ಷ್ಮವಾಗಿ ಗಮನಿಸಿ ಅವರಲ್ಲಿರುವ ಪ್ರತಿಭೆ ಗುರುತಿಸಬೇಕು. ಮಕ್ಕಳ ಗ್ರಾಮ ಸಭೆಗಳನ್ನು ಎಲ್ಲ ಕಡೆ ಆಯೋಜಿಸಲು ಆದೇಶ ಹೊರಡಿಸಲಾಗಿದೆ. ಅವರ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿರುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕಾಶೀನಾಥ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಚಲುವರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೂಪಣಾಧಿಕಾರಿ ಜಿ.ಆರ್. ದಿನೇಶ್, ಸಾಂಸ್ಥಿಕ ರಕ್ಷಣಾಧಿಕಾರಿ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ.ರಮೇಶ, ಸ್ವಯಂ ಸೇವಾ ಸಂಸ್ಥೆಯ ಗಂಗಾಧರ್ ಇದ್ದರು.