ಪಾಶ್ಚಿಮಾತ್ಯ ಶಿಕ್ಷಣದಿಂದ ಮಕ್ಕಳು ಜ್ಞಾನ ಪಡೆಯುತ್ತಿಲ್ಲ: ಸಿ.ಇ.ಶಂಕರ್

| Published : Feb 13 2024, 12:45 AM IST

ಸಾರಾಂಶ

ಭಾರತೀಯ ಸಂಸ್ಕೃತಿ, ಶಿಕ್ಷಣವನ್ನು ನೀಡದ ಕಾರಣ ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆಯೇ ಹೊರತು ಜ್ಞಾನವಂತರಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಸಿ.ಇ.ಶಂಕರ್ ತಿಳಿಸಿದರು. ಅರಸೀಕೆರೆಯಲ್ಲಿ ಶ್ರೀನಿವಾಸ ನಗರದಲ್ಲಿನ ಸೇವಾ ಸಂಕಲ್ಪ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಾರ್ಷಿಕೋತ್ಸವ । ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಅಭಿಮತಕನ್ನಡಪ್ರಭ ವಾರ್ತೆ ಅರಸೀಕೆರೆ

ಪಾಶ್ಚಿಮಾತ್ಯ ಸಂಸ್ಕೃತಿ, ಶಿಕ್ಷಣಕ್ಕೆ ಮಾರುಹೋಗಿ, ಭಾರತೀಯ ಸಂಸ್ಕೃತಿ, ಶಿಕ್ಷಣವನ್ನು ನೀಡದ ಕಾರಣ ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆಯೇ ಹೊರತು ಜ್ಞಾನವಂತರಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಸಿ.ಇ.ಶಂಕರ್ ತಿಳಿಸಿದರು.

ನಗರದ ಶ್ರೀನಿವಾಸ ನಗರದಲ್ಲಿನ ಸೇವಾ ಸಂಕಲ್ಪ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಭಾರತೀಯ ಶಿಕ್ಷಣ ತಜ್ಞರಾಗಿದ್ದ ರವಿಂದ್ರನಾಥ ಠಾಕೂರ್, ಅರವಿಂದ್ ಘೋಷ್, ಎಸ್.ರಾಧಾಕೃಷ್ಣನ್ ಅವರ ಪರಿಕಲ್ಪನೆಯ ಭಾರತೀಯ ಸಂಸ್ಕೃತಿಯ ಮಾನವೀಯ ಮೌಲ್ಯಗಳನ್ನು ಒಳಗೊಂಡ ಸಂಸ್ಕಾರಯುತ ಶಿಕ್ಷಣ ಪದ್ಧತಿಯನ್ನು ಆಳವಡಿಸಿಕೊಳ್ಳದೆ ಪಾಶ್ಚಿಮಾತ್ಯ ಸಂಸ್ಕೃತಿಯ ಶಿಕ್ಷಣಕ್ಕೆ ಮಾರುಹೋಗಿ ಮಕ್ಕಳಿಗೆ ಕಲಿಸುತ್ತಿರುವುದರಿಂದ ಯಾವುದನ್ನೂ ಪರಿಪೂರ್ಣವಾಗಿ ಕಲಿಯಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

ಸಾಮಾಜಿಕ ಕಾರ್ಯಕರ್ತ ಕೆ.ಎಸ್.ಶಂಕರ್ ನಾರಾಯಣ್ ಮಾತನಾಡಿ, ಮಕ್ಕಳಿಗೆ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣವನ್ನು ನೀಡುವುದರಿಂದ ಅವರನ್ನು ಒತ್ತಡದಿಂದ ಮುಕ್ತರಾಗಿ ಶಿಕ್ಷಣದ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಲು ಸಾಧ್ಯವಾಗುತ್ತದೆ. ಮನುಷ್ಯ ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕಲು ಸಾಧ್ಯವಿಲ್ಲ, ಪರಸ್ಪರ ಸಹಕಾರ, ಸಹಬಾಳ್ವೆಯ ಸಮಾನತೆಯಲ್ಲಿ ಬದುಕುವ ಅನಿವಾರ್ಯತೆ ಇರುವ ಕಾರಣ ತನ್ನ ಸುತ್ತಮುತ್ತಲಿನ ಸಮಾಜವನ್ನು ಗೌರವಿಸುವ ಸಂಸ್ಕಾರಯುತ ಮಾನವೀಯ ಮೌಲ್ಯಗಳ ಶಿಕ್ಷಣವನ್ನು ಪ್ರತಿಯೊಬ್ಬ ಮಕ್ಕಳಿಗೂ ಕಲಿಸುವ ಮೂಲಕ ಸಮಾಜದಲ್ಲಿ ಸತ್ಪಜೆಯಾಗಿ ಹಾಗೂ ದೇಶದ ಆಸ್ತಿಯಾಗಿ ಬೆಳಸಲು ಸಾಧ್ಯವಾಗುತ್ತದೆ ಎಂದು ಹೇಳಿದರು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಲತಾ ರಾಜೇಶ್ ವಹಿಸಿ ಮಾತನಾಡಿದರು. ವರ್ತಕರಾದ ಕೆ.ವಿ. ಪ್ರಕಾಶ್ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು. ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳು ಸಾರ್ವಜನಿಕರು ಹಾಗೂ ಪೋಷಕರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ಶಿಕ್ಷಣ ಸಂಯೋಜಕರಾದ ಬಿ.ಸಿ.ಗಿರೀಶ್, ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಆರ್.ಶ್ರೀಧರ್. ನಿರ್ದೇಶಕರಾದ ಸತ್ಯನಾರಾಯಣ್, ಶ್ರೀಕಾಂತ್, ಬಬ್ರುವಾಹನರಾವ್, ಜಿ.ಕುಮಾರ್, ರಾಮಚಂದ್ರ, ಮೋಹನ್ ಕುಮಾರ್, ಮಯೂರಿ ನಾಗೇಶ್, ಜಯಲಕ್ಷ್ಮೀ, ವೀಣಾ, ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ, ಶಿಕ್ಷಕರಾದ ಗಂಗಾಧರ್, ಲೋಕೇಶ್, ಬಸಂತಪ್ಪ, ಕುಮಾರಸ್ವಾಮಿ, ಚಂದ್ರಶೇಖರ್, ದೀಪಾ, ಅರ್ಚನಾ ಮತ್ತು ವಿದ್ಯಾರ್ಥಿಗಳು, ಪೋಷಕ ವರ್ಗ ಇದ್ದರು.ಅರಸೀಕೆರೆ ನಗರದ ಶ್ರೀನಿವಾಸ ನಗರದಲ್ಲಿರುವ ಸೇವಾ ಸಂಕಲ್ಪ ಶಾಲೆಯಲ್ಲಿ ಎರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಸಿ.ಇ.ಶಂಕರ್ ಉದ್ಘಾಟಿಸಿದರು.