ಮಕ್ಕಳೇ ನಾಡಿನ ಅಭಿವೃದ್ಧಿಗೆ ಗ್ಯಾರಂಟಿಯಾಗಿ: ಎಚ್.ಎಂ.ರೇವಣ್ಣ

| Published : Aug 26 2024, 01:34 AM IST

ಸಾರಾಂಶ

ರಾಜ್ಯದಲ್ಲಿನ ದೀನದುರ್ಬಲರು, ಮಹಿಳೆಯರ ಸಬಲೀಕರಣಕ್ಕೆ ಪಂಚ ಗ್ಯಾರಂಟಿ ನೀಡಿದೆ. ಈ ಯೋಜನೆಯಿಂದ ಕುಟುಂಬಗಳು ನೆಮ್ಮದಿ ಬದುಕು ಸಾಧಿಸುತ್ತಿವೆ. ಗ್ಯಾರಂಟಿ ನಿಲುಗಡೆ ಇಲ್ಲ. ಅಪಸ್ವರ ಬೇಡ. ಯೋಜನೆ ಸದ್ಭಳಕೆ ಮಾಡಿ ನೆಮ್ಮದಿಯಿಂದ ಬದುಕು ಸಾಗಿಸಿ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಶಿಸ್ತು, ಶ್ರದ್ಧೆಯಿಂದ ವಿದ್ಯಾರ್ಥಿಗಳು ಓದುವ ಜೊತೆಗೆ ನಾಡಿನ ಅಭಿವೃದ್ಧಿ, ಅಭಿವೃದ್ಧಿಗಾಗಿ ಗ್ಯಾರಂಟಿಯಾಗಿರಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ಹೋಬಳಿಯ ಲಕ್ಷ್ಮೀಪುರ ಗ್ರಾಮದ ಆರ್‌ಎಂಆರ್‌ ಕಲ್ಯಾಣಮಂಟಪ ಸಭಾಭವನದಲ್ಲಿ ಬೆಂಗಳೂರಿನ ರಂಗಮ್ಮ ಮುನಿರಂಗಪ್ಪ ಹಳ್ಳಿಕಾರ ಫೌಂಡೇಷನ್‌ ಟ್ರಸ್ಟ್ ಆಯೋಜಿಸಿದ್ದ ಹಳ್ಳಿಕಾರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಹಳ್ಳಿಕಾರ ಗೋವುಗಳ ಸಾಕಾಣಿಕೆಯ ಪಂಗಡವಾಗಿರುವ ಹಳ್ಳಿಕಾರ ಸಮಾಜ ರಾಜ್ಯದಲ್ಲಿಯೇ ಚಿರಪರಿಚಿತವಾಗಿದೆ. ಇದೇರೀತಿ ಸಮಾಜದ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿಯೂ ಹೆಸರು ಮಾಡಬೇಕು. ಸಮಾಜದ ಮುಖಂಡರು ಓದುವ ಮಕ್ಕಳಿಗೆ ಆಸರೆಯಾಗಿ ನಿಲ್ಲಬೇಕಿದೆ ಎಂದರು.

ಸಂಘಟನೆ ಭಿನ್ನಾಭಿಪ್ರಾಯ ಬಿಟ್ಟು, ಒಮ್ಮತದ ಅಭಿಪ್ರಾಯದೊಂದಿಗೆ ನೂರಾರುಯೋಜನೆ ರೂಪಿಸಿಕೊಳ್ಳಿ. ದೇಶಿಯ ತಳಿ ಹಳ್ಳಿಕಾರ ರಾಸುಗಳು ಸಂರಕ್ಷಣೆಗೆ ರೈತರು ಮುಂದಾಗಬೇಕು. ಕೃಷಿಯೊಂದಿಗೆ ಬದುಕು ಕಟ್ಟಿಕೊಳ್ಳುವ ಅನ್ನದಾತರಿಗೆ ಆಸರೆಯಾಗಬೇಕು ಎಂದರು.

ರಾಜ್ಯದಲ್ಲಿನ ದೀನದುರ್ಬಲರು, ಮಹಿಳೆಯರ ಸಬಲೀಕರಣಕ್ಕೆ ಪಂಚ ಗ್ಯಾರಂಟಿ ನೀಡಿದೆ. ಈ ಯೋಜನೆಯಿಂದ ಕುಟುಂಬಗಳು ನೆಮ್ಮದಿ ಬದುಕು ಸಾಧಿಸುತ್ತಿವೆ. ಗ್ಯಾರಂಟಿ ನಿಲುಗಡೆ ಇಲ್ಲ. ಅಪಸ್ವರ ಬೇಡ. ಯೋಜನೆ ಸದ್ಭಳಕೆ ಮಾಡಿ ನೆಮ್ಮದಿಯಿಂದ ಬದುಕು ಸಾಗಿಸುವಂತೆ ತಿಳಿಸಿದರು.

ಟ್ರಸ್ಟ್‌ ಅಧ್ಯಕ್ಷ ಸಹಕಾರರತ್ನ ಪುರಸ್ಕೃತ ಕೆ.ಎಂ.ನಾಗರಾಜು ಮಾತನಾಡಿ, ತಮ್ಮ ತಂದೆ ತಾಯಿ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಲಾಗಿದೆ. ಸಮಾಜದ ಮಕ್ಕಳ ಶೈಕ್ಷಣಿಕ ಭವಿಷ್ಯ, ಸಂಘಟನೆಗೆ ಟ್ರಸ್ಟ್ ಸದಾ ಮೀಸಲಾಗಿದೆ ಎಂದರು.

ಆರ್‌ಟಿಒ ಮಲ್ಲಿಕಾರ್ಜುನ ಮಾತನಾಡಿದರು. ಮಂಡ್ಯ, ಹಾಸನ, ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗ ಜಿಲ್ಲೆಯ ಸಮಾಜದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುವಿನಲ್ಲಿ ತೇರ್ಗಡೆಯಾದ ಸಮಾಜದ 133 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ನೀಡಲಾಯಿತು.

ಈ ವೇಳೆ ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ, ಟ್ರಸ್ಟಿಗಳಾದ ಶ್ರೀನಿವಾಸಮೂರ್ತಿ, ಎನ್.ನಾರಾಯಣಮೂರ್ತಿ, ಕೆ.ಸಿ.ಚಿಕ್ಕಣ್ಣಯ್ಯ, ಎಂ. ಮಾರುತಿ, ನಾಗರಾಜ ಬಾಬು, ಕರ್ನಾಟಕ ಹಳ್ಳಿಕಾರ ಯುವ ವೇದಿಕೆ, ಕೃಷ್ಣ ಹಳ್ಳಿಕಾರ ಮಹಾಸಂಸ್ಥಾನ ಪದಾಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.