ಸಾರಾಂಶ
ತಾಲೂಕು ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ । ಯುಗಮಾನೋತ್ಸವಕ್ಕೆ ವಿದ್ಯುಕ್ತ ಚಾಲನೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಪರಿಶುದ್ಧ, ಪವಿತ್ರವಾದ ಮನಸ್ಸಿನ ಮಕ್ಕಳಿಗೆ ಯೋಗ್ಯ ಸಂಸ್ಕಾರ ಮತ್ತು ಉತ್ತಮ ಮಾರ್ಗದರ್ಶನ ನೀಡಿದರೆ ಆದರ್ಶ ವ್ಯಕ್ತಿಗಳಾಗಿ ಬಾಳಲು ಸಾಧ್ಯ ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ, ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರ ಭದ್ರಸ್ವಾಮಿ ಮಹಾರಥೋತ್ಸವ ಅಂಗವಾಗಿ ಬುಧವಾರ ನಡೆದ ಎನ್.ಆರ್.ಪುರ ತಾಲೂಕು ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಜನ್ಮ ಕೊಟ್ಟವರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಯೋಗ್ಯ ಶಿಕ್ಷಣ, ಸಂಸ್ಕಾರ ನೀಡಿ ಬೆಳೆಸಬೇಕು. 5 ವರ್ಷದವರೆಗೆ ಮಕ್ಕಳನ್ನು ಹೂವಿನಂತೆ ಜೋಪಾನ ಮಾಡಿ. 10 ತುಂಬವ ಸಂದರ್ಭದಲ್ಲಿ ಮಕ್ಕಳ ತಪ್ಪಿಗೆ ಪೆಟ್ಟು ಕೊಟ್ಟು ತಿದ್ದುವ ಕೆಲಸ ಮಾಡಬೇಕು. 16ರ ನಂತರ ಮಕ್ಕಳನ್ನು ಸಹೋದರರಂತೆ ಕಂಡು ಪ್ರೋತ್ಸಾಹಿಸಿ ಎಂದು ಸಲಹೆ ಮಾಡಿದರು.ಮಕ್ಕಳಲ್ಲಿನ ಅದ್ಭುತ ಶಕ್ತಿ ಗುರುತಿಸಿ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು. ಕಿರಿಯ ವಯಸ್ಸಿನಲ್ಲಿ ಕೊಟ್ಟ ಸಂಸ್ಕಾರ ಜೀವನದ ಕೊನೆಯವರೆಗೆ ಇರುತ್ತದೆ. ಇದು ಮಕ್ಕಳ ಉಜ್ವಲ ಭವಿಷ್ಯಕ್ಕೆ ಕಾರಣ. ಜಾತ್ರಾ ಮಹೋತ್ಸವದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅತೀವ ಸಂತೋಷ ತಂದಿದೆ ಎಂದರು. ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ್ ಮಾತನಾಡಿ, ಮಕ್ಕಳನ್ನು ವಿಶ್ವಮಾನವರನ್ನಾಗಿ ಮಾಡಲು ಸಂಸ್ಕಾರ ನೀಡಬೇಕೆಂಬ ಸದುದ್ದೇಶದಿಂದ ಪರಿಷತ್ ಸ್ಥಾಪಿಸಿದ್ದು, ಅವರ ಪ್ರತಿಭೆ ಹೊರತರಲು ಪರಿಷತ್ ತಾಯಿ ಬೇರಾಗಿ ಕಾರ್ಯನಿರ್ವಹಿಸುತ್ತಿದೆ. ಓದಿನಿಂದ ಮಾತ್ರ ಮಕ್ಕಳು ವಿದ್ಯಾವಂತರಾಗಲು ಸಾಧ್ಯವಿಲ್ಲ ಎಂದು ಅರಿಯಬೇಕಿದೆ. ಮಾನವೀಯತೆಯಿಂದ ನಿಜವಾದ ಮನುಷ್ಯನಾಗಲು ಸಾಧ್ಯ. ಮಕ್ಕಳಲ್ಲಿ ಮಣ್ಣಿನ ಸಂಸ್ಕೃತಿ ಸಾರ, ದೇಶಭಕ್ತಿ, ಪರಿಸರ ಕಾಳಜಿ ಬೆಳೆಸಬೇಕಿದೆ ಎಂದರು. ರಂಭಾಪುರಿ ಪೀಠ ಆಶೀರ್ವದಿಸಿದರೆ ಶ್ರೀಪೀಠದಲ್ಲಿ 25 ಸಾವಿರ ಮಕ್ಕಳ ಸೇರಿಸಿ ರಾಜ್ಯಮಟ್ಟದ ಮಕ್ಕಳ ಸಮ್ಮೇಳನ ಮಾಡಲಾಗುವುದು ಎಂದು ಘೋಷಿಸಿದರು.
ಸಮ್ಮೇಳನ ಸರ್ವಾಧ್ಯಕ್ಷೆ ಬಿ.ಎ.ವರ್ಷಿಣಿ ಅಧ್ಯಕ್ಷತೆ ವಹಿಸಿದ್ದರು. ಸಹ ಅಧ್ಯಕ್ಷ ಎಫ್.ಎ.ಮನೋಜ್, ಸುಳ್ಳದ ಶಿವಸಿದ್ದ ರಾಮೇಶ್ವರ ಶಿವಾಚಾರ್ಯರು, ಬೇರುಗಂಡಿ ರೇಣುಕ ಮಹಂತ ಶಿವಾಚಾರ್ಯರು ಹಾಜರಿದ್ದರು. ಮಸಾಪ ಕಾರ್ಯಾಧ್ಯಕ್ಷ ಮಹದೇವ, ಕಾರ್ಯದರ್ಶಿ ಎಚ್.ವಿ.ಸಿದ್ದೇಶ್, ಜಿಲ್ಲಾಧ್ಯಕ್ಷ ಮಲ್ಲಿಗೆ ಸುಧೀರ್, ಹಾಸನ ಅಧ್ಯಕ್ಷ ಗಂಗಾಧರ, ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಕಸಾಪ ಮಾಜಿ ಅಧ್ಯಕ್ಷ ಕೆ.ಟಿ.ವೆಂಕಟೇಶ್, ರಾ. ಮ.ಸಾ. ಸಮ್ಮೇಳನದ ಸಹ ಅಧ್ಯಕ್ಷೆ ರಕ್ಷಿತ, ಹೋಬಳಿ ಮಸಾಪ ಅಧ್ಯಕ್ಷೆ ಕೆ.ಕಲಾ, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಚಿ.ಸ.ಪ್ರಭುಲಿಂಗ ಶಾಸ್ತ್ರಿ, ಗಂಗಾಧರಸ್ವಾಮಿ, ವೀರೇಶ ಕುಲಕರ್ಣಿ ಹಾಜರಿದ್ದರು.ಶ್ರೀಪೀಠದ ಸೋಮೇಶ್ವರ ದೇಗುಲದಿಂದ ವೀರಭದ್ರಸ್ವಾಮಿ ಮಹಾದ್ವಾರದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕಂಸಾಳೆ, ಡೊಳ್ಳು ಕುಣಿತ ದೊಂದಿಗೆ ವಿಜೃಂಭಣೆಯಿಂದ ನಡೆಯಿತು. ಮೆರವಣಿಗೆಯಲ್ಲಿ 150 ಅಡಿ ಉದ್ದದ ಕನ್ನಡ ಧ್ವಜ ಹಿಡಿದು ವಿದ್ಯಾರ್ಥಿಗಳು ಸಾಗಿದರು.
-- ಬಾಕ್ಸ್--ಮಕ್ಕಳ ಸಾಹಿತ್ಯ ಬೆಳೆಯಲಿ: ವರ್ಷಿಣಿ
ಬಾಳೆಹೊನ್ನೂರು: ಸುಂದರ ಅಭಿವ್ಯಕ್ತಿಯ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಮಕ್ಕಳ ಸಾಹಿತ್ಯ ಯುವ ಪೀಳಿಗೆಯಲ್ಲಿ ಬೆಳೆಯಬೇಕಿದೆ ಎಂದು ಎನ್.ಆರ್.ಪುರ ತಾಲೂಕು ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಬಿ.ಎ.ವರ್ಷಿಣಿ ಹೇಳಿದರು.ತಾ. ಪ್ರ. ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಲ್ಲವನೇ ಬಲ್ಲ ಬೆಲ್ಲದ ಸವಿ ಎಂಬಂತೆ ನಮ್ಮ ಭಾಷೆಯ ಸವಿ ಅರಿತಿದ್ದರೆ ಅದರ ಸಿಹಿ ಅನುಭವವಾಗುವುದು. ಈ ಹಿನ್ನೆಲೆಯಲ್ಲಿ ಅನೇಕ ಸಾಹಿತ್ಯ ಕೃತಿಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮನಸ್ಸು ನಮ್ಮದಾಗಬೇಕಿದೆ.
ನಮ್ಮ ಸ್ವಂತ ಅನುಭವದಿಂದ ಉತ್ತಮ ಕಾವ್ಯ ನಿಮಾಣವಾಗಲಿದ್ದು, ಇದರಿಂದ ಮನಸ್ಸಿಗೆ ಮಹದಾನಂದ ದೊರೆಯಲಿದೆ. ನಮ್ಮ ಭಾವನೆ ವ್ಯಕ್ತಪಡಿಸಲು, ಲೋಕಜ್ಞಾನಕ್ಕೆ ಮಾತೃಭಾಷೆ ಅಗತ್ಯ ಎಂಬುದು ಪ್ರಜ್ಞಾ ವಂತರ ಅನುಭವನದ ಮಾತು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂಬುದನ್ನು ಪ್ರತಿಯೊಬ್ಬ ಕನ್ನಡಿಗರು ಮನಗಾಣಬೇಕಿದೆ ಎಂದರು.ಇಂಗ್ಲೀಷ್‌ನ ಪ್ರಭಾವದಲ್ಲಿರುವಾಗ ಕನ್ನಡ ಸಾಹಿತ್ಯ ಜೀವಂತಿಕೆ ಉಳಿಸಿ ಬೆಳೆದಿರುವುದು ರೋಚಕ ಸಂಗತಿ. ಆದರೆ ಇಂದು ಇಂಗ್ಲೀಷ್ ಇನ್ನೂ ಹೆಚ್ಚಿರುವಾಗ ಕನ್ನಡ ಮರೆಯಾಗುವ ಆತಂಕದ ವಾತಾವರಣದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆದಿರುವುದು ಪೂರಕ ಎಂದು ಪ್ರತಿಪಾದಿಸಿದರು.
ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದಾಗ ಭವಿಷ್ಯದಲ್ಲಿ ಸಾಧಕರಾಗಲು ಸಾಧ್ಯ. ಮಗು ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡು ನಂತರ ಸಾಹಿತ್ಯಕ್ಕೊಂದು ಕೊಡುಗೆ ನೀಡುವಲ್ಲಿ ಸಂಶಯವಿಲ್ಲ.ವಿದ್ಯಾರ್ಥಿಗಳ ಒಕ್ಕೊರಲಿನ ಧ್ವನಿಯ ಫಲವಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಚನ್ನರಾಯಪಟ್ಟಣದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿದೆ. ಪರಿಷತ್ತಿನ ಮೂಲಕ ಎಳೆಯ ಚೇತನಗಳಲ್ಲಿ ನಾಡು, ನುಡಿ, ನೆಲ-ಜಲ, ಪರಿಸರದ ಕಾಳಜಿ , ವಿಶ್ವಮಾನವ ಸಂದೇಶ ನಾಡಿನೆಲ್ಲೆಡೆ ಪಸರಿಸಿ ಸೃಜನಶೀಲ ಬರವಣಿಗೆ, ಸಾಹಿತ್ಯಾಭಿರುಚಿ, ಮಾನವೀಯ ಮೌಲ್ಯ, ಮೂಡಿಸುತ್ತಿರುವುದು ಶ್ಲಾಘನೀಯ.
ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅನೇಕ ಗಂಭೀರ ಪ್ರಸ್ತುತ ವಿಚಾರಗಳು, ಚರ್ಚಾಗೋಷ್ಠಿ ಮುಂತಾದವು ನಡೆಯಬೇಕು. ಈ ಮೂಲಕ ಕನ್ನಡ ಪ್ರೇಮ ಜಾಗೃತವಾಗಬೇಕು ಎಂಬುದು ನಮ್ಮ ಆಶಯ ಎಂದರು. ೨೦ಬಿಹೆಚ್‌ಆರ್ ೮:ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಎನ್.ಆರ್.ಪುರ ತಾಲೂಕು ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಮಸಾಪ ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ್ ಉದ್ಘಾಟಿಸಿದರು. ರಂಭಾಪುರಿ ಜಗದ್ಗುರು ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನಾಧ್ಯಕ್ಷೆ ಬಿ.ಎ.ವರ್ಷಿಣಿ, ಸಹ ಅಧ್ಯಕ್ಷ ಎಫ್.ಎ.ಮನೋಜ್ ಇದ್ದರು.
-೨೦ಬಿಹೆಚ್‌ಆರ್ ೯:
ತಾಲೂಕು ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೆ ಬಿ.ಎ.ವರ್ಷಿಣಿ ಮಾತನಾಡಿದರು.-
೨೦ಬಿಹೆಚ್‌ಆರ್ ೧೦: ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ೧೫೦ ಅಡಿ ಉದ್ದದ ಕನ್ನಡ ಧ್ವಜ ಹೊತ್ತು ಮೆರವಣಿಗೆ ನಡೆಸಿದರು.