ಉತ್ಸಾಹದಿಂದ ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳು

| Published : Nov 14 2024, 12:46 AM IST

ಸಾರಾಂಶ

ನಿತ್ಯವೂ ಶಾಲೆಯಲ್ಲೇ ಪಾಠದಲ್ಲಿ ಮಗ್ನರಾಗುತ್ತಿದ್ದ ಮಕ್ಕಳಿಗೆ ಈ ಚಿತ್ರಕಲಾ ಸ್ಪರ್ಧೆಯು ಹೊಸತನಕ್ಕೆ ಕಾರಣವಾಯಿತು.

ಹುಬ್ಬಳ್ಳಿ:

''''ಕನ್ನಡಪ್ರಭ'''' ಮತ್ತು ''''ಏಷ್ಯಾನೆಟ್ ಸುವರ್ಣ ನ್ಯೂಸ್‌''''ನಿಂದ ಹುಬ್ಬಳ್ಳಿಯ ಇಂದಿರಾ ಗಾಜಿನಮನೆಯಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಗೆ ಬೆಳಗ್ಗೆ 9.30 ಗಂಟೆ ವರೆಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, ಬೆಳಗ್ಗೆ 11.30ರ ವರೆಗೂ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಕಂಡು ಬಂದಿತು. ಜಿಲ್ಲೆಯ ವಿವಿಧೆಡೆಯಿಂದ ಶಿಕ್ಷಕರು ಮಕ್ಕಳನ್ನು ವಾಹನಗಳಲ್ಲಿ ಕರೆತಂದರು.

ಮಕ್ಕಳ ಕಲರವ:

ನಿತ್ಯವೂ ಶಾಲೆಯಲ್ಲೇ ಪಾಠದಲ್ಲಿ ಮಗ್ನರಾಗುತ್ತಿದ್ದ ಮಕ್ಕಳಿಗೆ ಈ ಚಿತ್ರಕಲಾ ಸ್ಪರ್ಧೆಯು ಹೊಸತನಕ್ಕೆ ಕಾರಣವಾಯಿತು. ಆವರಣದಲ್ಲೇ ದಿನ ಕಳೆಯುತ್ತಿದ್ದ ಮಕ್ಕಳು ''''ಕನ್ನಡಪ್ರಭ'''' ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ಸಾಹದ ಚಿಲುಮೆಯಂತೆ ಕಂಡು ಬಂದರು. ಗಾಜಿನ ಮನೆ ಆವರಣದ ತುಂಬೆಲ್ಲ ನಕ್ಕು ನಲಿದಾಡಿದರು. ಎಲ್ಲಿ ನೋಡಿದರೂ ಮಕ್ಕಳ ಕಲರವ ಎದ್ದು ಕಾಣುತ್ತಿತ್ತು.

ಮಕ್ಕಳ ಕೈಯಲ್ಲಿ ಅರಳಿದ ಚಿತ್ತಾರ:

ಚಿತ್ರಕಲಾ ಸ್ಪರ್ಧೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಚಿತ್ರ ಬಿಡಿಸುವುದರಲ್ಲಿ ತಲ್ಲೀನರಾಗಿದ್ದರು. ಇನ್ನು ತಡವಾಗಿ ಬಂದಿದ್ದ ವಿದ್ಯಾರ್ಥಿಗಳು ಲಗುಬಗೆಯಲ್ಲಿ ಚಿತ್ರ ಬಿಡಿಸುತ್ತಿದ್ದರು. ಅದಕ್ಕೆ ಹೋಲುವ ಬಣ್ಣ ಹಾಕುತ್ತಿದ್ದರು. ಮಕ್ಕಳ ಬಣ್ಣದ ಕಲ್ಪನಾಲೋಕವು ಬಿಳಿ ಹಾಳೆಯಲ್ಲಿ ವಿಸ್ತರಿಸುತ್ತಾ ಹೋಗುತ್ತಿತ್ತು. ಕೊನೆಗೂ ಸ್ಪಷ್ಟ, ಶ್ವೇತವರ್ಣದ ಕಾಗದದಲ್ಲಿ ಮಕ್ಕಳ ಕೈಚಳಕದಲ್ಲಿ ಸುಂದರವಾದ ರೂಪಕಗಳು ಮೂಡಿದವು.

ಗಮನ ಸೆಳೆದ ಟ್ರ್ಯಾಕ್‌ ಆ್ಯಂಡ್‌ ಟ್ರೈಲ್‌ ಮಳಿಗೆ:

ಇಂದಿರಾ ಗಾಜಿನ ಮನೆಯ ಆವರಣದಲ್ಲಿ ಟ್ರ್ಯಾಕ್ ಆ್ಯಂಡ್ ಟ್ರೈಲ್ ಮಳಿಗೆ ತೆರೆದು ತಹರೇವಾರಿ ಸೈಕಲ್‌ಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನದ ಬೈಸಿಕಲ್‌ಗಳು ಆಕರ್ಷಣೀಯ ಕೇಂದ್ರವಾಗಿದ್ದವು. ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಸ್ಪರ್ಧೆ ಮುಗಿಯುತ್ತಿದ್ದಂತೆ ಸೈಕಲ್‌ಗಳಿರುವ ಮಳಿಗೆಯತ್ತ ತೆರಳಿ ಸೈಕಲ್‌ ವೀಕ್ಷಿಸಿದರು. ಮಳಿಗೆಯ ಸಿಬ್ಬಂದಿ ಬಗೆಬಗೆಯ ಸೈಕಲ್‌ಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಟ್ರ್ಯಾಕ್ ಆ್ಯಂಡ್ ಟ್ರೈಲ್‌ನವರು ಸ್ಪರ್ಧೆಯಲ್ಲಿ ಮೂರು ವಿಭಾಗದ ಮೊದಲ ಸ್ಥಾನ ಗೆದ್ದ ಮಕ್ಕಳಿಗೆ ಸೈಕಲ್ ಸ್ಪಾನ್ಸರ್ ಮಾಡಿದ್ದರು.

ಎನ್‌ಸಿಸಿಯಿಂದ ಅಚ್ಚುಕಟ್ಟಾದ ವ್ಯವಸ್ಥೆ:

ಮಕ್ಕಳಿಗೆ ಚಿತ್ರಬಿಡಿಸಲು ಬೇಕಾದ ಸೂಕ್ತ ಜಾಗದ ವ್ಯವಸ್ಥೆ ಮಾಡಲಾಗಿತ್ತು. ನಿಗದಿತವಾದ ವೇಳೆಗೆ ಆಗಮಿಸಿದ ಸಾವಿರಾರು ವಿದ್ಯಾರ್ಥಿಗಳು ನಿಗದಿಪಡಿಸಿದ ಜಾಗದಲ್ಲಿ ಕುಳಿತು ಸುಂದರವಾದ ಚಿತ್ರ ಬಿಡಿಸಿದರು. ಯಾವುದೇ ರೀತಿಯ ಅವ್ಯವಸ್ಥೆಯಾಗದಂತೆ ಜೆಜಿ ಕಾಮರ್ಸ್‌ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ಅಚ್ಚುಕಟ್ಟಾದ ನಿರ್ವಹಣೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಕಾರಣ‍ಾಯಿತು.

ಐಸ್‌ ಕ್ರೀಂ, ಕುಕ್ಕಿಸ್‌ ಸವಿದ ಮಕ್ಕಳು:

ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಕೆಎಂಎಫ್‌ನಿಂದ ನೀಡಲಾಗಿದ್ದ ಕುಕ್ಕಿಸ್‌ ಹಾಗೂ ಹ್ಯಾಂಗೋ ಕಂಪನಿಯಿಂದ ನೀಡಲಾಗಿದ್ದ ಐಸ್‌ಕ್ರೀಂನ ರುಚಿ ಸವಿದರು. ಮೊದಲೇ ಚಿತ್ರಕಲೆಗೆ ಬೇಕಾದ ಕಿಟ್‌ನೊಂದಿಗೆ ಕುಕ್ಕಿಸ್‌ ನೀಡಲಾಗಿತ್ತು. ಸ್ಪರ್ಧೆ ಆರಂಭವಾಗುತ್ತಿದ್ದಂತೆ ಮಕ್ಕಳು ಕುಕ್ಕಿಸ್‌ ಸವಿದು ಚಿತ್ರ ಬಿಡಿಸಲು ಆರಂಭಿಸಿದರು. ನಂತರ ಚಿತ್ರ ಪೂರ್ಣಗೊಳಿಸುತ್ತಿದಂತೆ ಐಸ್‌ಕ್ರೀಂ ನೀಡುತ್ತಿದ್ದಂತೆ ಸಂತಸದಿಂದ ಐಸ್‌ಕ್ರೀಂನ ತಿಂದು ಸಂಭ್ರಮಿಸಿದರು.