ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಗ್ರಾಮೀಣ ಪ್ರದೇಶದ ಮಕ್ಕಳು ಕೀಳರಿಮೆ ಬಿಟ್ಟು ಛಲದಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕು ಎಂದು ಕೃಷಿಕ್ ಸರ್ವೋದಯ ಫೌಂಡೇಶನ್ ಟ್ರಸ್ಟ್ ಅದ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಡಾ.ವೈ.ಕೆ. ಪುಟ್ಟಸೋಮೇಗೌಡ ಕರೆ ನೀಡಿದರು.ಕೆಎಸ್ಎಫ್ ಅಕಾಡೆಮಿಯು ವಿಜಯನಗರ ಎರಡನೇ ಹಂತದ ಕೃಷಿಕ್ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕೆ-ಸಿಇಟಿ, ನೀಟ್ ಕ್ರ್ಯಾಸ್ ಕೋರ್ಸ್ ತರಬೇತಿಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ನಗರ, ಪಟ್ಟಣ ಪ್ರದೇಶಗಳಲ್ಲಿ ಕಾನ್ವೆಂಟ್‌ಗಳಲ್ಲಿ ಓದಿದ ಮಕ್ಕಳ ಜೊತೆ ಗ್ರಾಮೀಣ ಪ್ರದೇಶದ ಮಕ್ಕಳು ಸ್ಪರ್ಧಿಸಲು ಸಾಧ್ಯವಿಲ್ಲ. ಅವರಿಗೆ ತರಬೇತಿ ನೀಡಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ಅನ್ನು ಆರಂಭಿಸಲಾಗಿದೆ. ಆದ್ದರಿಂದ ಗ್ರಾಮೀಣ ವಿದ್ಯಾರ್ಥಿಗಳು ಸವಾಲನ್ನು ಗಟ್ಟಿತನದಿಂದ ಎದುರಿಸಬೇಕು. ವೈದ್ಯರು, ಎಂಜಿನಿಯರುಗಳು ಮಾತ್ರವಲ್ಲದೇ ಐಎಎಸ್, ಐಪಿಎಸ್ ಮೊದಲಾದ ಪರೀಕ್ಷೆಗಳನ್ನು ಪಾಸು ಮಾಡಬೇಕು ಎಂದರು.
ಈಗ ಸಿಇಟಿ, ನೀಟ್ ತರಬೇತಿ ಪಡೆದವರು ಮುಂದೆ ಐಎಎಸ್, ಐಪಿಎಸ್ ಪರೀಕ್ಷೆ ತೆಗೆದುಕೊಳ್ಳಲು ಬಯಸಿದರೆ ಸಂಸ್ಥೆಯ ಬಾಗಿಲು ಸದಾ ತೆರೆದಿರುತ್ತದೆ. ಇದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.ಅಧ್ಯಕ್ಷತೆ ವಹಿಸಿದ್ದ ಕೃಷಿಕ್ ಸರ್ವೋದ ಫೌಂಡೇಶನ್ ಟ್ರಸ್ಟ್ ಮೈಸೂರು ಶಾಖೆ ಅಧ್ಯಕ್ಷ ಡಾ.ಎನ್.ಎಸ್. ರಾಮೇಗೌಡ ಮಾತನಾಡಿ, ಟ್ರಸ್ಟ್ ರಾಜ್ಯ ಮಟ್ಟದಲ್ಲಿ ಪ್ರತಿ ವರ್ಷ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಮಕ್ಕಳಿಗೆ 80 ಲಕ್ಷ ರು. ವಿದ್ಯಾರ್ಥಿ ವೇತನ ನೀಡುತ್ತಿದೆ. ಮೈಸೂರು ಕೇಂದ್ರವು 10 ಲಕ್ಷ ರು. ವಿದ್ಯಾರ್ಥಿ ವೇತನ ನೀಡುತ್ತಿದೆ. ಇದರ ಸದುಪಯೋಗ ಪಡೆದು, ಇಲ್ಲಿ ತರಬೇತಿ ಪಡೆದವರು ಮುಂದೆ ಸಂಸ್ಥೆಯ ರಾಯಭಾರಿಗಳಂತೆ ಕಾರ್ಯನಿರ್ವಹಿಸಬೇಕು ಎಂದರು.
ಆಲೋಚನೆ, ಮಾತು ಮತ್ತು ಕೃತಿಯಿಂದ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.ಮುಖ್ಯ ಅತಿಥಿಯಾಗಿದ್ದ ರಾಜ್ಯ ಸರ್ಕಾರದ ನಿವೃತ್ತ ವಿಶೇಷ ಕಾರ್ಯದರ್ಶಿ ಡಾ.ಪಿ.ಬೋರೇಗೌಡ ಮಾತನಾಡಿ, ಇಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳ ಫಾಲೋಅಪ್ ಕೆಲಸ ಆಗಬೇಕು. ಪ್ರೌಢಶಾಲಾ ಹಂತದಿಂದಲೇ ಈ ಸಂಸ್ಥೆಗೆ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಕೆಲಸ ಆಗಬೇಕು. ಬನ್ನೂರು- ಮಲಿಯೂರುನಿಂದ ತಾವು ಹಾಗೂ ಎನ್. ನಂಜೇಗೌಡರು ಸೇರಿ ಪೈ ಲಟ್ ಕಾರ್ಯಕ್ರಮ ಆರಂಭಿಸುವುದಾಗಿ ಹೇಳಿದರು.
ಮತ್ತೊರ್ವ ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು, ಅತ್ಯುತ್ತಮವಾಗಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಕಠಿಣ ಪರಿಶ್ರಮದಿಂದ ಓದಿದರೆ ಯಶಸ್ಸು ಖಂಡಿತಾ ಸಿಗುತ್ತದೆ ಎಂದರು.ಈಗ ಚೆನ್ನಾಗಿ ಓದಿದರೆ ಎಲ್ಲಿ ಬೇಕಾದರೂ ಉದ್ಯೋಗ ಸಿಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಗುರುಹಿರಿಯರಿಗೆ ಗೌರವ ನೀಡಬೇಕು. ತಂದೆ- ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಸಮಾಜದ ಋಣವನ್ನು ತೀರಿಸಬೇಕು ಎಂದರು.
ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ, ಕೃಷಿಕ್ ಸರ್ವೋದಯ ಫೌಂಡೇಶನ್ ಟ್ರಸ್ಟ್ ಉಪಾಧ್ಯಕ್ಷರಾದ ಬಿ.ಕೆ. ಶಿವಣ್ಣ, ಎನ್. ನಂಜೇಗೌಡ, ಜಂಟಿ ಕಾರ್ಯದರ್ಶಿ ವೈ.ಕೆ.ಕೆಂಚೇಗೌಡ, ಖಜಾಂಚಿ ಎಸ್.ವಿ. ಗೌಡಪ್ಪ, ಟ್ರಸ್ಟಿಗಳಾದ ಕೆ.ಎಂ. ಚಂದ್ರೇಗೌಡ, ಅತಿಥಿಗಳಾಗಿದ್ದರು. ಕಾರ್ಯದರ್ಶಿ ಎಚ್.ಸಿ.ಕಿಶೋರ್ ಚಂದ್ರ ಸ್ವಾಗತಿಸಿದರು. ಶೈಕ್ಷಣಿಕ ನಿರ್ದೇಶಕ ಡಾ.ಬಿ. ಶಂಕರ್ ವಂದಿಸಿದರು. ಶೈಕ್ಷಣಿಕ ಸಂಯೋಜಕಿ ಎಂ.ವಿ. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಭೂಮಿಕಾ ಅನಿಸಿಕೆ ವ್ಯಕ್ತಪಡಿಸಿದರು. ನಿತ್ಯಶ್ರೀ ಕೃಷ್ಣ ಪ್ರಾರ್ಥಿಸಿದರು.ಸಂಪನ್ಮೂಲ ವ್ಯಕ್ತಿಗಳಾದ ರಾಮೇಗೌಡ, ರೇವಣ್ಣ, ನಂದೀಶ್, ರಾಘವೇಂದ್ರ, ಕೃಷ್ಣಯ್ಯ, ಸಾಹಿತಿ ಟಿ. ಸತೀಶ್ ಜವರೇಗೌಡ, ಕೆಎನ್‌ಸಿ ಶಾಲೆ ಸಂಸ್ಥಾವಕ ಡಾ.ಕೆ.ಎನ್. ಚಂದ್ರಶೇಖರ್ ಮೊದಲಾದವರು ಇದ್ದರು.