ಒಂದುವರೆ ಎಕರೆಯಲ್ಲಿ 60 ಚೀಲ ಭತ್ತ ಬೆಳೆದ ಮಕ್ಕಳು

| Published : Nov 28 2024, 12:31 AM IST

ಸಾರಾಂಶ

ಆಟ, ಪಾಠದ ಜೊತೆಗೆ ಶಾಲೆಯ ಮಕ್ಕಳು ಭತ್ತದ ಗದ್ದೆಯಲ್ಲಿ ನಾಟಿ ಮಾಡಿ, ಇದೀಗ ನಾಟಿ ಮಾಡಿದ ಭತ್ತವನ್ನು ಕಟಾವು ಮಾಡಿ ಅಕ್ಷರ ಕಲಿಕೆಯ ಜೊತೆಗೆ ಕೃಷಿ ಕಲಿತಿದ್ದಾರೆ. ಒಂದುವರೆ ಎಕರೆಯಲ್ಲಿ 60 ಚೀಲ ಭತ್ತ ಬೆಳೆದಿದ್ದಾರೆ.

ಅಕ್ಷರ ಕಲಿಕೆಯ ಜತೆಗೆ ಕೃಷಿಯನ್ನೂ ಮಾಡಬಹುದು ಎಂದು ತೋರಿಸಿಕೊಟ್ಟ ವಿದ್ಯಾರ್ಥಿಗಳು

ಕನ್ನಡಪ್ರಭ ವಾರ್ತೆ ಕಾರಟಗಿ

ಆಟ, ಪಾಠದ ಜೊತೆಗೆ ಶಾಲೆಯ ಮಕ್ಕಳು ಭತ್ತದ ಗದ್ದೆಯಲ್ಲಿ ನಾಟಿ ಮಾಡಿ, ಇದೀಗ ನಾಟಿ ಮಾಡಿದ ಭತ್ತವನ್ನು ಕಟಾವು ಮಾಡಿ ಅಕ್ಷರ ಕಲಿಕೆಯ ಜೊತೆಗೆ ಕೃಷಿ ಕಲಿತಿದ್ದಾರೆ. ಒಂದುವರೆ ಎಕರೆಯಲ್ಲಿ 60 ಚೀಲ ಭತ್ತ ಬೆಳೆದಿದ್ದಾರೆ.

ತಾಲೂಕಿನ ಸಿದ್ದಾಪುರ ಗ್ರಾಮದ ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಈ ಸಾಹಸಕ್ಕೆ ಕೈ ಹಾಕಿ ಅಕ್ಷರ ಕಲಿಕೆಯ ಜೊತೆಗೆ ಕೃಷಿಯನ್ನೂ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಕಳೆದ ನಾಲ್ಕು ತಿಂಗಳ ಹಿಂದೆ ಸಿದ್ದಾಪುರ ಗ್ರಾಮದ ರೈತರ ಜಮೀನೊಂದರಲ್ಲಿ ಮಕ್ಕಳು ‌ಭತ್ತ ನಾಟಿ ಮಾಡಿದ್ದರು. ಇದಕ್ಕೂ ಮುನ್ನ ನಾಟಿ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗಿತ್ತು. ಜೊತೆ ಜತೆಗೆ ಬೆಳೆ‌ ನಿರ್ವಹಣೆ, ಕಳೆ ಕೀಳುವುದು, ರೋಗಗಳ ನಿಯಂತ್ರಣಕ್ಕೆ ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ಸಿಂಪಡಣೆ ಸೇರಿ ಇತರೆ ಕೃಷಿ ಚಟುವಟಿಕೆಗಳನ್ನು ಹಿರಿಯ ರೈತರಾದ ರಾಜಾಸಾಬ್‌ ಹಾಗೂ ಅಮ್ಮಾಸಾಬ್‌ ಸಲಹೆ ಮೇರೆಗೆ ಕೆಲಸ ಮಾಡಿದ್ದರು. ಜಮೀನಿನ ಮಾಲೀಕ, ರೈತ ಅಷ್ಟೇ ಆಸಕ್ತಿ ಮತ್ತು ಕಾಳಜಿಯಿಂದ ಮಾಹಿತಿ ನೀಡಿದ್ದರು.

ಮಾಹಿತಿ ಪಡೆದ ವಿದ್ಯಾರ್ಥಿಗಳು ಜಮೀನಿನಲ್ಲಿ ಭತ್ತ ನಾಟಿಯ ಪ್ರಯೋಗ ಮಾಡಿದ್ದರು. ಆಗ ನಾಟಿ ಮಾಡಿದ್ದ ಜಮೀನಿನಲ್ಲಿ ಭತ್ತದ ಬೆಳೆ ಕಟಾವಿಗೆ ಬಂದ ಹಿನ್ನೆಲೆ ಈಗ ಮತ್ತೊಮ್ಮೆ ಮಕ್ಕಳು ಜಮೀನಿಗೆ ಹೋಗಿ ಭತ್ತದ ಕಾಟಾವು ಮಾಡಿದ್ದು, ಬರೋಬರಿ 60 ಚೀಲ ಬೆಳೆ ಬಂದಿದೆ.

ನಾಲ್ಕು ತಿಂಗಳ ಹಿಂದೆ ಕೆಸರು ಗದ್ದೆಯಲ್ಲಿ ಇಳಿದು ಎಲ್ಲರೂ ಬತ್ತದ ಸಸಿ ನಾಟಿ ಮಾಡಿದ್ದರು. ಈ ವೇಳ ಸಸಿ ಮಡಿ ಹಾಕುವ ರೀತಿ ಭೂಮಿ ಹದ ಮಾಡುವುದು, ಯಾವಾಗ ಗೊಬ್ಬರ ಹಾಕಬೇಕು ಎನ್ನುವುದನ್ನು ತಿಳಿಸಿಕೊಡಲಾಗಿತ್ತು. ‌ಬೆಳೆಗೆ ಯಾವ ಕಾಲದಲ್ಲಿ ಯಾವ ರಸಗೊಬ್ಬರ ನೀಡಬೇಕು?, ಇಳುವರಿ ಹೆಚ್ಚಾಗಲು ಯಾವ ಕ್ರಮ ಅನುಸರಿಸಬೇಕು?, ಫಸಲಿಗೆ ಮಾರುಕಟ್ಟೆಯಲ್ಲಿ ಸದ್ಯದ ಬೆಲೆ? ಬೆಳೆ ರವಾನೆ ಸೇರಿ ಇತರೆ ಮಾಹಿತಿಯನ್ನು ವಿದ್ಯಾರ್ಥಿಗಳು ರೈತರಿಂದ ಪಡೆದುಕೊಂಡಿದ್ದರು.

ಶಾಲಾ ವಾರ್ಡನ್ ದುರುಗಮ್ಮ, ಸಿಬ್ಬಂದಿ ರಸೂಲ್ ಬೀ, ಲಕ್ಷ್ಮೀ, ವಿದ್ಯಾರ್ಥಿಗಳಾದ ಅದಿಬಾ, ಜಾಹೇದ್, ಫಾತೀಮಾ, ರೇಷ್ಮಾ, ರೋಷನಾ, ರಾಬಿಯಾ, ಆಲಿಯಾ ಸೇರಿ ಇತರರಿದ್ದರು.