ಸಾರಾಂಶ
ಮಕ್ಕಳು ಶ್ರೀಕೃಷ್ಣನಂತೆ ಅಪಾರ ಜ್ಞಾನಸಂಪತ್ತು ಹೊಂದಿರಬೇಕು. ರಾಧೆಯ ಹಾಗೆ ಸಮಸ್ತವನ್ನು ಪ್ರೀತಿಯಿಂದ, ಕರುಣೆಯಿಂದ ಕಾಣುವ ಗುಣ ಬೆಳೆಸಿಕೊಳ್ಳಬೇಕು
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಪ್ರತಿಷ್ಠಿತ ಆರ್.ವಿ.ವಿದ್ಯಾ ಶಿಕ್ಷಣ ಸಂಸ್ಥೆಯಲ್ಲಿ 5251ನೇ ಶ್ರೀಕೃಷ್ಣಜನ್ಮಾಷ್ಟಮಿ ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆ ಖಜಾಂಚಿ ಸುರೇಶ್ ನೀಲಂಗಿ, ಮಕ್ಕಳು ಶ್ರೀಕೃಷ್ಣನಂತೆ ಅಪಾರ ಜ್ಞಾನಸಂಪತ್ತು ಹೊಂದಿರಬೇಕು. ರಾಧೆಯ ಹಾಗೆ ಸಮಸ್ತವನ್ನು ಪ್ರೀತಿಯಿಂದ, ಕರುಣೆಯಿಂದ ಕಾಣುವ ಗುಣ ಬೆಳೆಸಿಕೊಳ್ಳಬೇಕು ಮತ್ತು ಅವರ ಆದರ್ಶದ ಗುಣಗಳನ್ನು ಮಕ್ಕಳಲ್ಲಿ ಬರುವಂತೆ ಮಾಡುವುದು ಶಿಕ್ಷಕರು ಮತ್ತು ಅವರ ಪೋಷಕರ ಕರ್ತವ್ಯವಾಗಿದೆ. ಇದರ ಜೊತೆಗೆ ಧಾರ್ಮಿಕತೆ, ಆಧ್ಯಾತ್ಮಿಕತೆ ಮೌಲ್ಯಗಳನ್ನು ಬೆಳೆಸಲು ಪೂರಕವಾದ ವಾತವರಣ ಬೆಳೆಸಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಸಂಯೋಜಕ ಕವಿತಾ ಹಿರೇಮಠ ಮಾತನಾಡಿ, ಬೆಣ್ಣೆ ಪ್ರಿಯ ಶ್ರೀಕೃಷ್ಣನು ಬಾಲ್ಯದಲ್ಲಿ ಮಾಡಿದ ಪವಾಡಗಳು ಹಾಗೂ ಸೆರೆಮನೆಯಿಂದ ಅರಮನೆ ವರೆಗೆ ನಡೆದ ವೃತ್ತಾಂತವನ್ನು, ಅವರ ಮಹಿಮೆಯನ್ನು ಮತ್ತು ಶ್ರೀಕೃಷ್ಣಜನ್ಮಾಷ್ಟಮಿ ಆಚರಣೆ ವಿಶೇಷತೆ ಮಕ್ಕಳಿಗೆ ವಿವರಿಸಿದರು. ಸಂಸ್ಥೆಯ ಪ್ರಾಚಾರ್ಯ ಶಿವಾನಂದ ಕುಮಾರ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಇಂತಹ ಆಚರಣೆ ಮಾಡುವುದರಿಂದ ಮಕ್ಕಳಲ್ಲಿ ಧಾರ್ಮಿಕ ಪರಂಪರೆ ವಿಷಯಗಳು ತಿಳಿಯುತ್ತವೆ. ಇದರಿಂದ ಮುಂದಿನ ಅವರ ವ್ಯಕ್ತಿತ್ವ ಮತ್ತು ವಿಕಾಸವು ಉತ್ತಮವಾಗುತ್ತದೆ. ಸಂಸ್ಥೆಯಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳುವುದರಿಂದ ಮಕ್ಕಳು ಹೊಸದನ್ನು ಕಲಿತಂತೆ ಆಗುತ್ತದೆ ಎಂದರು.ಸಂಸ್ಥೆ ಅಧ್ಯಕ್ಷೆ ಕಮಲಾ ಎನ್. ದೇವರಕಲ್, ಮಕ್ಕಳ ಕೃಷ್ಣ-ರಾಧೆಯ ವೇಷಭೂಷಣ ಕಂಡು ಹರ್ಷ ವ್ಯಕ್ತಪಡಿಸಿದರು. ಸಂಸ್ಥೆ ಸಿಬ್ಬಂದಿ ವರ್ಗದವರಿದ್ದರು. ಶೃತಿ ಸ್ವಾಗತಿಸಿದರು. ದೇವಮ್ಮ ವಂದಿಸಿದರು. ರೋಹಿಣಿ ಮತ್ತು ಜಯಲಕ್ಷ್ಮಿ ನಿರೂಪಿಸಿದರು.
ಪುಟಾಣಿ ಮಕ್ಕಳು ಪುಟ್ಟ ಪುಟ್ಟ ಹೆಜ್ಜೆ ಹಾಕಿ ಕೊಳಲು ನುಡಿಸುವ ನೃತ್ಯ ರಮ್ಯವಾಗಿತ್ತು. ಪ್ರತಿ ಮಗುವು ಶ್ರೀಕೃಷ್ಣ ಮತ್ತು ರಾಧೆಯ ವೇಷಭೂಷಣವನ್ನು ಹಾಕಿಕೊಂಡು ವಿವಿಧ ಹಾಡುಗಳಿಗೆ ನೃತ್ಯ ಗಮನ ಸೆಳೆಯಿತು.