ಸಾರಾಂಶ
ಕನ್ನಡಪ್ರಭ ವಾರ್ತೆ ನಿಪ್ಪಾಣಿ
ತಾಯಿಯ ಕಣ್ಣೀರು ಕಾಣುತ್ತದೆ. ಆದರೆ ತಂದೆ ಕಣ್ಣೀರು ಎಂದಿಗೂ ಕಾಣುವುದಿಲ್ಲ. ಮೇಲ್ನೋಟಕ್ಕೆ ನಗುಮುಖ ತೋರಿಸಿದರೂ ತಂದೆಯ ಒಳನೋವನ್ನು ಮಕ್ಕಳು ಅರ್ಥೈಸಿಕೊಳ್ಳಬೇಕು ಎಂದು ಖ್ಯಾತ ಉಪನ್ಯಾಸಕ ಡಾ.ವಂಸಂತ ಹಂಕಾರೆ ಹೇಳಿದರು.ಇಲ್ಲಿನ ವಿದ್ಯಾ ಸಂವರ್ಧಕ ಮಂಡಳದ 66ನೇ ಸಂಸ್ಥಾಪನಾ ದಿನದ ಅಂಗವಾಗಿ ವಿಎಸ್‌ಎಂ ಫೌಂಡೇಶನ್ ವತಿಯಿಂದ ವಿಎಸ್‌ಎಂ ಸೋಮಶೇಖರ ಆರ್.ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪಾಲಕರು ಮತ್ತು ಮಕ್ಕಳು ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಇಂದಿನ ದಿನಗಳಲ್ಲಿ ಮಕ್ಕಳಿಗೆ ತಂದೆ ತಾಯಿಯ ಮೇಲಿನ ಪ್ರೀತಿ ಕಡಿಮೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಕಾಮ, ಪ್ರೇಮ ಸೃಷ್ಟಿಯಾಗುತ್ತಿದೆ. ಅದು ನಿಜವಾದ ಪ್ರೇಮವಲ್ಲ. ತಂದೆ-ತಾಯಿ, ಸಹೋದರ-ಸಹೋದರಿಗಳಿಗೆ ಪ್ರೀತಿಸಿ, ಅದು ನಿಜವಾದ ಪ್ರೀತಿ. ಮಕ್ಕಳು ಹೆತ್ತವರ ಪ್ರೀತಿ ಮತ್ತು ತ್ಯಾಗ ತಿಳಿದುಕೊಂಡು ಅವರ ಗೌರವವ ಹೆಚ್ಚಿಸಬೇಕು ಎಂದರು.ಹೆತ್ತವರಿಗೆ ಮತ್ತು ರಾಷ್ಟ್ರಕ್ಕೆ ಕೃತಜ್ಞತೆ ತೋರಿ, ಪ್ರೀತಿಸಬೇಕು. ಜಗತ್ತು ಚಂದ್ರನತ್ತ ಹೋಗುತ್ತಿರುವಾಗ ಪೋಷಕರನ್ನು ಮರೆಯಬೇಡಿ, ಅವರನ್ನು ಗೌರವಿಸಿ. ಅವರ ನೋವು ತಿಳಿದುಕೊಳ್ಳಬೇಕು. ಯಾವುದೇ ಭ್ರಮೆಗಳಿಗೆ ಬಲಿಯಾಗದೇ ಹೆತ್ತವರ ವಿರುದ್ಧ ಹೋಗಬೇಡಿ. ಅವರ ಶ್ರಮ, ಪ್ರೀತಿ, ನಿಮಗಾಗಿ ಮಾಡಿರುವ ಕರ್ತವ್ಯದ ಬಗ್ಗೆ ಅರಿವಿರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿಎಸ್‌ಎಂ ಸಂಚಾಲಕ ಸಂಜಯ ಶಿಂತ್ರೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಂದೆ-ತಾಯಿ, ಮಕ್ಕಳ ಕಣ್ಣೀರು ಉಕ್ಕಿದವು. ಇಡಿ ಸಭಾಂಗಣವೇ ಭಾವುಕವಾಗಿತ್ತು.ಈ ವೇಳೆ ಮಂಡಳದ ಚೇರಮನ್ ಚಂದ್ರಕಾಂತ ಕೋಠಿವಾಲೆ, ವೈಸ್-ಚೇರಮನ್ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಂಚಾಲಕ ಹರಿಶ್ಚಂದ್ರ ಶಾಂಡಗೆ, ಸಂಜಯ ಮೊಳವಾಡೆ, ಅವಿನಾಶ ಪಾಟೀಲ, ಸಚಿನ ಹಾಲಪ್ಪನವರ, ಗಣೇಶ ಖಡೇದ, ಪ್ರವೀನ ಪಾಟೀಲ, ವಿಎಸ್‌ಎಂ ಫೌಂಡೇಶನ್ ಅಧ್ಯಕ್ಷ ರುದ್ರಕುಮಾರ ಕೋಠಿವಾಲೆ, ರೋಹನ ಕೋಠಿವಾಲೆ, ವಿನಾಯಕ ಪಾಟೀಲ, ಡಾ. ಸಿದ್ಧಗೌಡ ಪಾಟೀಲ, ಪ್ರಲ್ಹಾದ ನರಕೆ, ಮೊದಲಾದವರು ಸಹಿತ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಇದ್ದರು. ಪ್ರೊ. ಕೈಲಾಸ್ ಪಠಾಡೆ ಅತಿಥಿ ಪರಿಚಯಿಸಿದರು. ಮಾಧವಿ ಅವಳೆಕರ ನಿರೂಪಿಸಿ, ಕಾಂಚನ ಕಮತೆ ವಂದಿಸಿದರು.
ಮಕ್ಕಳಿಂದ ತಂದೆ-ತಾಯಿ ಪಾದ ಪೂಜೆವಿಎಸ್ಎಂನ ಪ್ರಾಥಮಿಕ, ಪ್ರೌಢಶಾಲೆಯ ಹಾಗೂ ಸಿಬಿಎಸ್‌ಇ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ವಿಧಿವತ್ತಾಗಿ ತಂದೆ-ತಾಯಿಗಳ ಪಾದ ಪೂಜೆ ನೆರವೇರಿಸಿದರು. ಸಾಯಿ ಮಂದಿರದ ಪೂಜಾರಿ ಗುರುಮೂರ್ತಿ ಹಿರೇಮಠ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಯಿತು.