ವಿದ್ಯಾರ್ಥಿಗಳು ಜೀವನದಲ್ಲಿ ವಿದ್ಯೆ ಜೊತೆಗೆ ಸಂಸ್ಕಾರವನ್ನು ಕಲಿತು ಈ ದೇಶಕ್ಕೆ ಹಾಗೂ ಸಮಾಜಕ್ಕೆ ಶಕ್ತಿಯಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಿ ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತ ಜಿ. ಭೀಮೇಶ್ವರ ಜೋಶಿ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಿದ್ಯಾರ್ಥಿಗಳು ಜೀವನದಲ್ಲಿ ವಿದ್ಯೆ ಜೊತೆಗೆ ಸಂಸ್ಕಾರವನ್ನು ಕಲಿತು ಈ ದೇಶಕ್ಕೆ ಹಾಗೂ ಸಮಾಜಕ್ಕೆ ಶಕ್ತಿಯಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಿ ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತ ಜಿ. ಭೀಮೇಶ್ವರ ಜೋಶಿ ಕರೆ ನೀಡಿದರು.ಇಲ್ಲಿನ ಅನುಪಿನಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಗುರುಕುಲ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಸತ್ಯನಾರಾಯಣ ಪೂಜೆ ಹಾಗೂ ಜನ್ಮದಾತರಿಗೆ ಪಾದಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಜ್ಞಾನ ಹಾಗೂ ಭಾಗ್ಯದ ಕ್ಷಣವನ್ನು ಬಳಸಿಕೊಂಡು ದೇಶಕ್ಕೆ ಒಂದು ದೊಡ್ಡ ಶಕ್ತಿಯಾಗಿ ಬೆಳೆಯಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇಂದು ನಮಗೆ ಸರಿಯಾದ ಗುರಿಯಿಲ್ಲ, ಗುರು ಇಲ್ಲ ಎಂಬಂತಹ ಪರಿಸ್ಥಿತಿ ಕೆಲವೆಡೆ ನಿರ್ಮಾಣವಾಗಿದೆ, ಅದು ನಮ್ಮ ದುರಂತ. ನಾವು ಸರಿಯಾದ ಗುರಿ ಹಾಗೂ ಗುರುವನ್ನು ಹೊಂದಬೇಕು. ಆ ನಿಟ್ಟಿನಲ್ಲಿ ರಾಮಕೃಷ್ಣ ವಿದ್ಯಾಸಂಸ್ಥೆ ಮಾಡುತ್ತಿರುವ ಕಾರ್ಯ ನಿಜಕ್ಕೂ ಸ್ವಾಗತಾರ್ಹ ಎಂದರು.
ನಮ್ಮ ಭೂಮಿ ಪವಿತ್ರವಾದದ್ದು, ಇಲ್ಲಿನ ಆಧ್ಯಾತ್ಮಿಕ ಸಂಪತ್ತು ಹಾಗೂ ಸಾಂಸ್ಕೃತಿಕ ಪರಂಪರೆ ನಿಜಕ್ಕೂ ನಮ್ಮ ಯುವಶಕ್ತಿಯನ್ನು ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾಗಿ ಬೆಳಸುತ್ತಿದೆ ಎಂದರು. ತಂದೆ-ತಾಯಿ ತಮ್ಮ ಮಕ್ಕಳ ಆಶೋತ್ತರಗಳನ್ನು ಪೂರೈಸುವಲ್ಲಿ ಎಷ್ಟು ಕಷ್ಟಪಟ್ಟಿರುತ್ತಾರೆ ಎಂಬುದನ್ನು ಗಮನಿಸುವ ಅಗತ್ಯವಿರುತ್ತದೆ, ಅದನ್ನು ಕಲಿಸಿಕೊಡುವ ನಿಟ್ಟಿನಲ್ಲಿ ಪಾದಪೂಜೆ ಅಂತಹ ಕಾರ್ಯಕ್ರಮ ಒಂದು ಪೂರಕ ಹಾಗೂ ಪ್ರೇರಕ ಎಂದರು.ಯಾರೇ ಆಗಲಿ ನಿಮ್ಮ ಬದುಕಿನಲ್ಲಿ ನಿಮಗೆ ಸಹಾಯ ಹಾಗೂ ಸಹಕಾರ ಮಾಡಿದವರನ್ನು, ವಿದ್ಯೆ ಕಲಿಸಿದ ಗುರುಗಳನ್ನು, ಜನ್ಮ ನೀಡಿದ ತಂದೆ-ತಾಯಿಯನ್ನು ಮರೆಯಬಾರದು. ನೀವು ಮುಂದೆ ನಿಮ್ಮ ಸ್ವಂತ ಕಾಲ ಮೇಲೆ ನಿಂತಾಗ ಅವರೆಲ್ಲರ ಋಣ ತೀರಿಸುವ ಹೊಣೆಗಾರಿಕೆ ನಿಮ್ಮಲ್ಲಿ ಬೆಳೆಯಬೇಕು. ನಾನು ನನ್ನ ಜೀವನದಲ್ಲಿ ೩೩ ವರ್ಷಗಳ ಕಾಲ ಸಾಕಷ್ಟು ಶಾಲಾ-ಕಾಲೇಜುಗಳಿಗೆ ವಿದ್ಯಾ ಸಂಸ್ಥೆಗಳಿಗೆ ಭೇಟಿ ನೀಡಿದ್ದೇನೆ, ಆದರೆ ಈ ಗುರುಕುಲದ ವಿಶಿಷ್ಟತೆ ನಿಜಕ್ಕೂ ಶ್ಲಾಘನೀಯ. ವರ್ಷಗಳಿಂದ ಇಂತಹ ಪಾದಪೂಜೆ ನಡೆಯುತ್ತಿರುವುದು ಮೆಚ್ಚುಗೆಯ ವಿಷಯ, ನಾವು ನಮ್ಮ ಜೀವನದಲ್ಲಿ ತಂದೆ ತಾಯಿಯರ ದೇವರ ಸಮಾಜದ ಹಾಗೂ ಗುರುವಿನ ಋಣವನ್ನು ತೀರಿಸಬೇಕು. ಈ ಚತುರ್ ಸ್ವರಗಳಲ್ಲಿ ಬದುಕನ್ನು ರೂಪಿಸಿಕೊಂಡಾಗ ಬದುಕು ಪರಿಪೂರ್ಣವಾಗುತ್ತದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿದ್ದ ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ೨೦೨೬-೨೭ರ ಸಾಲಿನಲ್ಲಿ ರಾಮಕೃಷ್ಣ ವಿದ್ಯಾಸಂಸ್ಥೆ ನಡೆಸಲು ಉದ್ದೇಶಿಸಿರುವ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನ ನಾಮಫಲಕವನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.ಕಾರ್ಯಕ್ರಮದ ಮುಖ್ಯ ರೂವಾರಿಯಾಗಿದ್ದ ರಾಮಕೃಷ್ಣ ವಿದ್ಯಾಸಂಸ್ಥೆ ವ್ಯವಸ್ಥಾಪಕ ಟ್ರಸ್ಟಿ ಶೋಭಾ ಆರ್. ವೆಂಕಟರಮಣ ಅವರು ಮಾತನಾಡಿದರು.
ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಜನ್ಮದಾತರ, ಪೋಷಕರ ಪಾದಪೂಜೆಯನ್ನು ಧಾರ್ಮಿಕ ವಿಧಿ-ವಿಧಾನದೊಂದಿಗೆ ನೆರವೇರಿಸಿದರು. ಇದೇ ರಾಮಕೃಷ್ಣ ವಿದ್ಯಾನಿಕೇತನದ ಸಾಧಕ ವಿಧ್ಯಾರ್ಥಿ ಪ್ರಸ್ತುತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹಣಕಾಸು ಮತ್ತು ಲೆಕ್ಕಪತ್ರ ವಿಭಾಗದ ಆಡಳಿತ ಸಹಾಯಕರಾಗಿರುವ ಆಕಾಶ್ ಟಿ.ಎಸ್. ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಟ್ರಸ್ಟ್‌ನ ಸದಸ್ಯ ಡಿ.ಎಂ. ದೇವರಾಜ್ ಮಾತನಾಡಿದರು. ವಿದ್ಯಾಶ್ರಮ ಕೃಷ್ಣ ಟ್ರಸ್ಟ್‌ನ ಅಧ್ಯಕ್ಷ ಡಾಕ್ಟರ್ ಬಿ.ಆರ್. ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಕೋ ಆರ್ಡಿನೇಟರ್‌ಗಳಾದ ಕೆ.ಡಿ.ಶರತ್ ಕುಮಾರ್, ಕೆ.ಎಸ್. ಅರುಣ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.