ಪ್ರತಿಭೆ ಹೊರಹಾಕಲು ಮಕ್ಕಳಿಗೆ ವೇದಿಕೆ ಅಗತ್ಯ: ಪ್ರಕಾಶ್ ತಾರೀಕೊಪ್ಪ

| Published : Feb 15 2025, 12:30 AM IST

ಸಾರಾಂಶ

ಪ್ರತಿಭೆ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಈ ಪ್ರತಿಭೆ ಹೊರಬರಲು ವೇದಿಕೆ ಅಗತ್ಯವಾಗಿದೆ.

ಯಲ್ಲಾಪುರ: ಸಂವಾದಾತ್ಮಕ ಅವಧಿ, ಕಲೆ, ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆ ಮಕ್ಕಳ ಕಲಿಕೆಯನ್ನು ಮೋಜಿನೊಂದಿಗೆ ಸಂಯೋಜಿಸಲು ನೆರವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಗುರುವಾರ ತಾಲೂಕಿನ ಉಮ್ಮಚಗಿಯ ಸ.ಹಿ.ಪ್ರಾ. ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಮತ್ತು ಶಾಲಾ ಮಕ್ಕಳ ಕಿನ್ನರ ಮೇಳ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಮಾತನಾಡಿ, ಶಾಲೆಯ ಶಿಕ್ಷಕರ ಸೃಜನಾತ್ಮಕತೆ ಮತ್ತು ಕ್ರಿಯಾಶೀಲತೆಯಿಂದ ಶಾಲೆ ಉತ್ತಮವಾಗಿ ಶಾಲೆ ನಡೆಯುತ್ತಿದ್ದು, ಶಿಕ್ಷಕ, ಪಾಲಕ, ಬಾಲಕರ ಸಹಯೋಗದಿಂದ ಇದು ಸಾಧ್ಯವಾಗುತ್ತಿದೆ. ಗ್ರಾಪಂ ವತಿಯಿಂದ ಇವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಅತಿಥಿಗಳಾಗಿದ್ದ ತಾ.ದೈ.ಶಿ. ಪರಿವೀಕ್ಷಕ ಪ್ರಕಾಶ್ ತಾರೀಕೊಪ್ಪ ಮಾತನಾಡಿ, ಪ್ರತಿಭೆ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಈ ಪ್ರತಿಭೆ ಹೊರಬರಲು ವೇದಿಕೆ ಅಗತ್ಯವಾಗಿದ್ದು, ಇಂತಹ ವೇದಿಕೆಯನ್ನು ಈ ಕಿನ್ನರ ಮೇಳ ಒದಗಿಸಿಕೊಟ್ಟಿದೆ ಎಂದರು.

ಕ್ಷೇತ್ರ ಶಿಕ್ಷಣ ಸಂಯೋಜಕ ಪ್ರಶಾಂತ್ ಜಿ.ಎನ್. ಮಾತನಾಡಿ, ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆಯಲ್ಲಿ ಸ್ವಾಗತಿಸಿದ್ದು ಮತ್ತು ವಿವಿಧ ಕಲೆಯನ್ನು ವಿಜ್ಞಾನ, ರಂಗೋಲಿ, ಕರಕುಶಲ ಪ್ರದರ್ಶನ, ಸೆಲ್ಫಿ ಕಾರ್ನರ್‌ಗಳ ಮೂಲಕ ಹೊರಹೊಮ್ಮಿಸಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಂಸ್ಕೃತ ನಾಟಕ ಕಲಿಸಿದ ಶ್ರೀಮಾತಾ ಸಂಸ್ಕೃತ ಪಾಠಶಾಲೆಯ ಪ್ರಾಧ್ಯಾಪಕ ರಾಜೇಶ್ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಶ್ರೀಮಾತಾ ಸಂಸ್ಕೃತ ಮಹಾಪಾಠಶಾಲೆಯ ಅಧ್ಯಾಪಕ ವಿ. ರಾಜೇಶ್ ಶಾಸ್ತ್ರಿ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಪಾಲಕರೂ ಕಲಿಯಬೇಕಾದ ಸಂಗತಿಗಳು ಬಹಳಷ್ಟಿವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಾಗಿ, ಸಂಸ್ಕೃತ ಸಂಸ್ಕೃತಿ ಕಲಿತು ಸುಸಂಸ್ಕೃತರಾಗೋಣ ಎಂದು ಆಶಿಸಿದರು.

ಮಂಚೀಕೇರಿ ಸಿ.ಆರ್.ಪಿ. ಕೆ.ಆರ್. ನಾಯ್ಕ ಮಾತನಾಡಿ, ಈ ಕಲಿಕಾ ಹಬ್ಬ ವಿದ್ಯಾರ್ಥಿಗಳಿಗೆ ಸಂಘಟನೆಯ ಅರಿವು ಮೂಡಿಸಲು ನೆರವಾಗುತ್ತದೆ ಎಂದರು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಿ.ಆರ್.ಪಿ. ವಿಷ್ಣು ಭಟ್ ಸ್ವಾಗತಿಸಿದರು. ಶಿಕ್ಷಕರಾದ ಜ್ಯೋತಿ ಎಂ.ಡಿ. ನಿರ್ವಹಿಸಿದರು. ಶ್ರೀಮತಿ ದೇವಾಡಿಗ ವಂದಿಸಿದರು. ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್. ಆಧಾರಿತ ಕಲಿಕಾ ಹಬ್ಬದಲ್ಲಿ ೧೦ ಶಾಲೆಗಳ ಸುಮಾರು ೧೪೦ ಮಕ್ಕಳು, ಪಾಲಕರು, ಶಿಕ್ಷಕರು, ಎಸ್.ಡಿ.ಎಂ.ಸಿ.ಯವರು ಪಾಲ್ಗೊಂಡಿದ್ದರು. ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.