ಸಾರಾಂಶ
ಪ್ರತಿ ಮಕ್ಕಳಿಗೂ ಶಾಲಾ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ಹಾಗೂ ಸಂಸ್ಕಾರಯುತ ಶಿಕ್ಷಣ ಅಗತ್ಯ ಎಂದು ಉಪನ್ಯಾಸಕಿ ಮಧುರ ಮಂಜುನಾಥ್ ತಿಳಿಸಿದರು.
- ಮಲ್ಲಂದೂರಿನ ಹೊನ್ನಮ್ಮೇಶ್ವರಿ ಮಹಿಳಾ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆಯಲ್ಲಿ ಮಧುರ ಮಂಜುನಾಥ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪ್ರತಿ ಮಕ್ಕಳಿಗೂ ಶಾಲಾ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ಹಾಗೂ ಸಂಸ್ಕಾರಯುತ ಶಿಕ್ಷಣ ಅಗತ್ಯ ಎಂದು ಉಪನ್ಯಾಸಕಿ ಮಧುರ ಮಂಜುನಾಥ್ ತಿಳಿಸಿದರು.
ಭಾನುವಾರ ಮಲ್ಲಂದೂರಿನ ಶಾಲಾ ಆವರಣದಲ್ಲಿ ಧ.ಗ್ರಾ.ಯೋಜನೆ ಕುದುರೆ ಗುಂಡಿ ವಲಯ ಹೊಡಿಯಾಲ ಕಾರ್ಯ ಕ್ಷೇತ್ರದ ಆಶ್ರಯದಲ್ಲಿ ನೂತನವಾಗಿ ಪ್ರಾರಂಭವಾದ ಹೊನ್ನಮ್ಮೇಶ್ವರಿ ಮಹಿಳಾ ಜ್ಞಾನ ವಿಕಾಸ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ಮೂಲ ಭೂತ ಅಗತ್ಯಗಳಲ್ಲಿ ಶಿಕ್ಷಣವೂ ಸೇರಿದೆ. ಪ್ರತಿ ಮನೆಗಳಲ್ಲಿರುವ ವಾತಾವರಣ ಮಗುವಿನ ಮೇಲೆ ಪರಿಣಾಮ ಬೀರಲಿದೆ. ಮಕ್ಕಳಿಗೆ ಮೊದಲ ಗುರು ತಂದೆ, ತಾಯಿಗಳಾಗಿದ್ದಾರೆ. ಶಿಕ್ಷಣ ಎಂಬುದು ಕೇವಲ, ಅಕ್ಷರ ಜ್ಞಾನಕ್ಕೆ, ಉದ್ಯೋಗಕ್ಕೆ ಮಾತ್ರ ಸೀಮಿತವಾಗಿರದೆ ಮುಂದಿನ ಸಂಸ್ಕಾರಯುತ ಉತ್ತಮ ಜೀವನ ನಡೆಸಲು ಸಹಕಾರಿಯಾಗಬೇಕಾಗಿದೆ. ಪ್ರತಿ ಮಹಿಳೆ ಹಣೆಗೆ ಧರಿಸುವಂತಹ ಕುಂಕುಮ, ಮಾಂಗಲ್ಯ, ಕಾಲ್ಗೆಜ್ಜೆಗಳು ಕೇವಲ ಸೌಂದರ್ಯಕ್ಕೆ ಮಾತ್ರವಾಗಿರದೆ ಅದಕ್ಕೆ ವೈಜ್ಞಾನಿಕ ಕಾರಣ ಸಹ ಇದೆ ಎಂದು ಉದಾಹರಣೆ ಯೊಂದಿಗೆ ವಿವರಿಸಿದರು. ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ರಂಜಿತ ಮಾತನಾಡಿ, ಧರ್ಮಸ್ಥಳದ ಅಮ್ಮನವರ ಕನಸಿನ ಕೂಸಾದ ಮಹಿಳಾ ಜ್ಞಾನ ವಿಕಾಸ ಕೇಂದ್ರ 1992 ರಲ್ಲಿ ಪ್ರಾರಂಭ ವಾಗಿದೆ. ಮಲ್ಲಂದೂರಿನಲ್ಲಿ 6 ಸಂಘ ಸೇರಿಸಿ ಹೊನ್ನಮ್ಮೇಶ್ವರಿ ಮಹಿಳಾ ಜ್ಞಾನ ವಿಕಾಸ ಕೇಂದ್ರ ಎಂದು ನಾಮಕರಣ ಮಾಡಿದ್ದೇವೆ. ಜ್ಞಾನ ವಿಕಾಸ ಕೇಂದ್ರದ ಮೂಲಕ ಮಹಿಳೆಯರಿಗೆ ಕುಟುಂಬ ನಿರ್ವಹಣೆ, ಹಣಕಾಸು ವ್ಯವಹಾರ ಜ್ಞಾನ, ಮಕ್ಕಳ ಶಿಕ್ಷಣ, ಪೌಷ್ಠಿಕ ಆಹಾರ, ವೈಯ್ಯಕ್ತಿಕ ಸ್ವಚ್ಛತೆ, ಪರಿಸರ ಪ್ರಜ್ಞೆ, ಸ್ವ ಉದ್ಯೋಗ, ಸರ್ಕಾರಿ ಸೌಲಭ್ಯಗಳ ಬಳಕೆ, ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕ್ಷೇತ್ರದ ತಜ್ಞರಿಂದ ಮಾಹಿತಿ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳನ್ನು ನಡೆಸುತ್ತೇವೆ. ಪ್ರತಿ ತಿಂಗಳು ಜ್ಞಾನ ವಿಕಾಸ ಕೇಂದ್ರದ ಸಭೆಗೆ ಎಲ್ಲಾ ಸದಸ್ಯರು ಆಗಮಿಸಬೇಕು ಎಂದರು.ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಅಶೋಕ್ ವಹಿಸಿದ್ದರು. ಅತಿಥಿಗಳಾಗಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಜ್ಞಾನ ವಿಕಾಸ ಕೇಂದ್ರದ ದಾಖಲಾತಿ ಹಸ್ತಾಂತರಿಸಿದರು. ಸಭೆಯಲ್ಲಿ ಸೇವಾ ಪ್ರತಿನಿಧಿ ಸಂದೇಶ್, ಕೃಷ್ಣಮೂರ್ತಿ, ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಸುನೀತ ಇದ್ದರು.