ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಇಂದು ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ಅತ್ಯಂತ ಅವಶ್ಯವಾಗಿದೆ. ಶಿಕ್ಷಣ ಕೇವಲ ಜ್ಞಾನ ತುಂಬುವುದು ಆಗಬಾರದು, ಬದುಕಿನ ಅನುಭವಗಳನ್ನು ನೀಡುವ ಕಾರ್ಯವಾಗಬೇಕು ಎಂದು ಪದ್ಮರಾಜ್ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ ಹೇಳಿದರು.ಪಟ್ಟಣದ ಸಾತವಿರೇಶ್ವರ ಸಭಾಭವನದಲ್ಲಿ ಪದ್ಮರಾಜ ಪಬ್ಲಿಕ್ ಶಾಲೆ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಇಂದು ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿವೆ. ನಿರಂತರ ಅಭ್ಯಾಸದ ಫಲಶ್ರುತಿಯೇ ಸಾಧನೆ ಎನ್ನುವ ಕನಸನ್ನು ಮಕ್ಕಳಲ್ಲಿ ಶಿಕ್ಷಕ ವರ್ಗ ತುಂಬ ಬೇಕಾಗಿದೆ. ಪಾಲಕರು ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಶಿಕ್ಷಕರ ಶ್ರಮವಷ್ಟೇ ಪಾಲಕರ ಶ್ರಮವೂ ಮಕ್ಕಳ ಮೇಲಿರಬೇಕಿದೆ ಎಂದರು.ಜಿ.ಪಿ.ಪೋರವಾಲ ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ಎಂ.ಪಾಟೀಲ ಮಾತನಾಡಿ, ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಇಂದು ಸಂಸ್ಕಾರ ಅತ್ಯಂತ ಅಗತ್ಯವಾಗಿದೆ. ಭಾರತ ದೇಶ ಭವ್ಯ ಪರಂಪರೆಯ ದೇಶವಾಗಿದೆ. ಸಂಸ್ಕೃತಿ, ಸಂಸ್ಕಾರ ಇಲ್ಲದ ಶಿಕ್ಷಣ ಅದು ಜೀವನ ರೂಪಿಸಲು ಸಾಧ್ಯವಿಲ್ಲ ಹೀಗಾಗಿ ಮೌಲ್ಯಾಧಾರಿತ ಶಿಕ್ಷಣ ಅವಶ್ಯಕ ಎಂದು ಅಭಿಪ್ರಾಯ ಪಟ್ಟರು.ಸಾನಿಧ್ಯವನ್ನು ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ವಹಿಸಿ ಆಶೀರ್ವಚನ ನೀಡಿದರು. ಶಾಲೆಯ ಪ್ರಾಚಾರ್ಯ ವಿ.ಬಿ.ಲಮಾಣಿ ವರದಿ ವಾಚನ ಮಾಡಿದರು. ವೇದಿಕೆ ಮೇಲೆ ಶಾಲೆಯ ಆಕಾಶ ಗಾಳಿಮಠ, ಕೋಮಲ ನಾಗೂರ, ಕಾರ್ತಿಕ ನಂದಿಕೋಲ ಇದ್ದರು.
ಕಾರ್ಯಕ್ರಮದಲ್ಲಿ ರಾಣಿ ಜೋಗುರ, ಎಸ್.ಎಸ್.ಪೋದ್ದಾರ, ಎ.ಎಸ್.ಕಿಣಗಿ, ಎಸ್.ಆರ್.ಹಾಲಕೇರಿ, ಆಸೀಫ್ ಕೊಂಕಣಿ, ಎಸ್.ಎಸ್.ಮಲ್ಲೇದ, ಗಿರಿಜಾ ಸೊನ್ನದ, ಎಸ್.ಎನ್.ಜೋಗೂರ, ಕೆ.ಶಿ.ಹಿರೇಮಠ, ನೀಲಮ್ಮ ಬಿರಾದಾರ, ಭಾರತಿ ಹಿರೇಮಠ, ಆರ್.ಎಸ್.ಬ್ಯಾಕೋಡ, ಶಶಿಕಲಾ ಹೂಗಾರ, ಸುರೇಶ ಸುಣಗಾರ, ಅಭಿಷೇಕ ಬಿರಾದಾರ, ಶಿವಪುತ್ರ ಭಾಸಗಿ, ವಿ.ಎಸ್.ಚೌದ್ರಿ ಸೇರಿದಂತೆ ಇತರರು ಇದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.