ಮಕ್ಕಳಿಗೆ ತಾಂತ್ರಿಕ, ಸ್ಪರ್ಧಾತ್ಮಕ ಶಿಕ್ಷಣದ ಅವಶ್ಯಕತೆಯಿದೆ: ಡಾ. ಅನಿಲ್

| Published : May 15 2024, 01:30 AM IST

ಮಕ್ಕಳಿಗೆ ತಾಂತ್ರಿಕ, ಸ್ಪರ್ಧಾತ್ಮಕ ಶಿಕ್ಷಣದ ಅವಶ್ಯಕತೆಯಿದೆ: ಡಾ. ಅನಿಲ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಪಠ್ಯಕ್ರಮದ ಜೊತೆಗೆ ಮಕ್ಕಳಿಗೆ ಬೇಕಾದ ಅಗತ್ಯ ಪಠ್ಯೇತರ ಚುಟವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆ ನೂರಕ್ಕೆ ನೂರಷ್ಟು ಫಲಿತಾಂಶ ಪಡೆದುಕೊಂಡಿದೆ. ಇಂಗ್ಲೀಷ್ ಶಿಕ್ಷಣ ಕ್ರಮ, ಅನುವಾದ, ವಿನೂತನ ಕಲಿಕಾ ವಿಧಾನ, ಶಿಕ್ಷಕರ ಕ್ರಮಬದ್ಧತೆ, ಪೈಪೋಟಿಯುತ ಶೈಕ್ಷಣಿಕ ಯುಗದಲ್ಲಿ ಸ್ಟೇಟ್ ಪಠ್ಯ ಕ್ರಮದಲ್ಲಿ ಸಹ ವ್ಯಾಸಂಗ ಮಾಡಿ ಶಿಕ್ಷಕರು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ಅಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದು, ಆಧುನಿಕ, ತಾಂತ್ರಿಕ ಹಾಗೂ ಸ್ಪರ್ಧಾತ್ಮಕವಾದ ಈ ಜಗತ್ತಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆಗಳಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ ಒಂದು ಶಿಕ್ಷಣ ಸಂಸ್ಥೆಯನ್ನು ನಡೆಸುವುದು ಸುಲಭವಲ್ಲ ಎಂದು ನಗರದ ಠಾಗೂರ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಆರ್. ಅನಿಲ್ ತಿಳಿಸಿದರು.

ನಗರದ ಭಾರತೀಯ ವೈದ್ಯಕೀಯ ಸಂಘದಲ್ಲಿ ಮಂಗಳವಾರ ಠಾಗೂರ್ ವಿದ್ಯಾಸಂಸ್ಥೆಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 53 ವರ್ಷಗಳನ್ನು ಪೂರೈಸಿರುವ ನಮ್ಮ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚು ಆದ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ, ಇಲ್ಲಿ ಓದಿದ ಎಷ್ಟೋ ವಿದ್ಯಾರ್ಥಿಗಳು ಅತ್ಯುತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ತಾಲೂಕು ಮಟ್ಟದ ಶಿಕ್ಷಣಕ್ಕೂ ಹಾಗೂ ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿರುವ ಶಿಕ್ಷಣಕ್ಕೂ ವ್ಯತ್ಯಾಸವಿದ್ದು, ಅಂತಹ ಶಿಕ್ಷಣವನ್ನು ತಾಲೂಕು ಮಟ್ಟದಲ್ಲಿ ಕೊಡುವ ಚಿಂತನೆ ನಡೆಸಿದ್ದೇವೆ ಎಂದರು.

ಮಕ್ಕಳ ಪೋಷಕರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಇದಕ್ಕೆ ಸಾಕಷ್ಟು ಸವಾಲುಗಳನ್ನು ನಾವು ಎದುರಿಸಬೇಕಿದೆ. ಶಿಕ್ಷಣ ಪ್ರಪಂಚವು ಕ್ಷಿಪ್ರಗತಿಯಲ್ಲಿ ಬಲದಾಗುತ್ತಿರುವ ಸನ್ನಿವೇಶದಲ್ಲಿ ನಮ್ಮ ಸಂಸ್ಥೆಯು ಮಕ್ಕಳಿಗೆ ಮತ್ತಷ್ಟು ಪೂರಕ ಶಿಕ್ಷಣ ನೀಡಲೆಂದು ಹೊಸ ಹೊಸ ಯೋಜನೆಗಳು, ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದೆ. ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಮಕ್ಕಳ ಪೋಷಕರಿಗೆ ಹೊರೆಯಾಗದಂತೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಇಂಗ್ಲೀಷ್ ಮಾಧ್ಯಮದ ಕಲಿಕೆಗೆ ಉತ್ತೇಜನ ನೀಡುತ್ತಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಆರ್. ಶಶಿಕಲಾ ಅನಿಲ್ ಮಾತನಾಡಿ, ರಾಜ್ಯದ ಪಠ್ಯಕ್ರಮದ ಜೊತೆಗೆ ಮಕ್ಕಳಿಗೆ ಬೇಕಾದ ಅಗತ್ಯ ಪಠ್ಯೇತರ ಚುಟವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆ ನೂರಕ್ಕೆ ನೂರಷ್ಟು ಫಲಿತಾಂಶ ಪಡೆದುಕೊಂಡಿದೆ. ಇಂಗ್ಲೀಷ್ ಶಿಕ್ಷಣ ಕ್ರಮ, ಅನುವಾದ, ವಿನೂತನ ಕಲಿಕಾ ವಿಧಾನ, ಶಿಕ್ಷಕರ ಕ್ರಮಬದ್ಧತೆ, ಪೈಪೋಟಿಯುತ ಶೈಕ್ಷಣಿಕ ಯುಗದಲ್ಲಿ ಸ್ಟೇಟ್ ಪಠ್ಯ ಕ್ರಮದಲ್ಲಿ ಸಹ ವ್ಯಾಸಂಗ ಮಾಡಿ ಶಿಕ್ಷಕರು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ, ಶಾಲಾ ಮಟ್ಟದಲ್ಲಿ ಸಂಶೋಧನೆ ನಡೆಸುವ ಮೂಲಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಬಿ.ಸಿ. ಸತ್ಯಪ್ರೇಮ, ಶಾಲೆಯ ಮೆಂಟರ್, ಸಂವಹನ ತಜ್ಞ ಎಂ.ಜೆ. ಶ್ರೀಕಾಂತ್ ಸೇರಿ ಶಾಲೆಯ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರಿದ್ದರು.