ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೈತಿಕ ಮೂಲ್ಯ, ಹಿರಿಯರಿಗೆ, ಶಿಕ್ಷಕರಿಗೆ ಗೌರವ ನೀಡುವ ಗುಣ ಕಲಿಸುವುದು ಮುಖ್ಯ. ಮಕ್ಕಳ ಪ್ರಗತಿ ಬಗ್ಗೆ ಪೋಷಕರು ಶಾಲೆಗೆ ಭೇಟಿ ನೀಡಿ ವಿಚಾರಿಸಿಕೊಳ್ಳಬೇಕು. ಪಾಲಕರಿಂದ ಇದು ಸರಿಯಾದ ರೀತಿಯಲ್ಲಿ ಆದಾಗ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬಹುದು

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ವಿದ್ಯಾಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವುದು ಅಗತ್ಯ. ಕಾರ್ಯಾಗಾರ ಆಯೋಜನೆ ಮಕ್ಕಳ ಬೌದ್ಧಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಭಾರತೀ ವಿದ್ಯಾಸಂಸ್ಥೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಆಶಯ್ ಜಿ.ಮಧು ಹೇಳಿದರು.

ಭಾರತೀಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಡ್ಯ, ಭಾರತೀ ಎಜುಕೇಷನ್ ಟ್ರಸ್ಟ್ ಆಶ್ರಯದಲ್ಲಿ ನಡೆದ ವಾರ್ಷಿಕ ಪ್ರಾಯೋಗಿಕ ಪರೀಕ್ಷಾ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೈತಿಕ ಮೂಲ್ಯ, ಹಿರಿಯರಿಗೆ, ಶಿಕ್ಷಕರಿಗೆ ಗೌರವ ನೀಡುವ ಗುಣ ಕಲಿಸುವುದು ಮುಖ್ಯ. ಮಕ್ಕಳ ಪ್ರಗತಿ ಬಗ್ಗೆ ಪೋಷಕರು ಶಾಲೆಗೆ ಭೇಟಿ ನೀಡಿ ವಿಚಾರಿಸಿಕೊಳ್ಳಬೇಕು. ಪಾಲಕರಿಂದ ಇದು ಸರಿಯಾದ ರೀತಿಯಲ್ಲಿ ಆದಾಗ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬಹುದು ಎಂದರು.

ಸಂಸ್ಥೆ ಚೇರ್‍ಮನ್, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಉಪಾನ್ಯಾಸಕರು ರಾಜಕೀಯದಿಂದ ದೂರವಿದ್ದು, ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುವ ಕಡೆ ಗಮನ ಹರಿಸಬೇಕು. ಉಪನ್ಯಾಸಕರ ಗುರಿ ಶೈಕ್ಷಣಿಕ ಪ್ರಗತಿಗಷ್ಟೇ ಸಿಮೀತವಾಗಿರಬೇಕು ಎಂದರು.

ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸದನ್ನು ಕಲಿಯಲು ಶಿಕ್ಷಕರಿಗೆ ಮೂರ್ನಾಲ್ಕು ವರ್ಷಗಳ ಕಾಲ ಆಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರ ಆಯೋಜನೆ ಮಾಡುವ ಮೂಲಕ ಶಿಕ್ಷಕರ ನವೀನ ಬೋಧನೆಯಿಂದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಅವಕಾಶವಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಹಾವಳಿ ಹೆಚ್ಚಾಗಿದೆ. ವಿದ್ಯಾರ್ಥಿಗಳು ವಾಟ್ಸಾಪ್ ಮೂಲಕ ನೋಟ್ಸ್ ಕಳಿಸಬೇಡಿ. ಇದರಿಂದ ವಿದ್ಯಾರ್ಥಿ ಫೇಸ್ಬುಕ್, ಇನ್ಸ್‌ಟಗ್ರಾಮ್ ಪ್ರವೇಶ ಮಾಡಿ ಅಡ್ಡ ದಾರಿ ಹಿಡಿಯಲು ನಾವೇ ಕಾರಣರಾಗುತ್ತೇವೆ ಎಂದು ಎಚ್ಚರಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಚಲುವಯ್ಯ ಮಾತನಾಡಿ, ಜಿಲ್ಲೆಯನ್ನು ಶೈಕ್ಷಣಿಕವಾಗಿ ಮುಂದೆ ತರಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಲಾಗುತ್ತಿದೆ. ಪರೀಕ್ಷೆ ಮಾದರಿಯ ಮೂರು ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಪರೀಕ್ಷೆಗೆ ಮಕ್ಕಳು ತಯಾರಾಗಲು ನೀಲನಕ್ಷೆ ಸಹಾಯ ಮಾಡುತ್ತದೆ ಎಂದರು.

ಈ ವೇಳೆ ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯು.ಎಸ್.ನಟರಾಜು, ಕಾರ್ಯದರ್ಶಿ ಪಿ.ಕಾಂತರಾಜು, ಜಿಲ್ಲಾ ಸಂಶೋಜಕರಾದ ಮಹದೇಸ್ವಾಮಿ, ಗುರುಲಿಂಗೇಗೌಡ, ಗಣೇಶ್‌ಕುಮಾರ್, ಜವರಾಯಿ, ಕೆಂಪಯ್ಯ, ಲಕ್ಕಪ್ಪ, ಹುಚ್ಚಯ್ಯ, ಸಿ.ಎಂ.ಸುಧಾ, ಎಂ.ಎನ್.ಮಹೇಶ್‌ಚಂದ್ರ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತೀ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಪ್ರಾಂಶುಪಾಲರಾದ ಸಿ.ವಿ ಮಲ್ಲಿಕಾರ್ಜುನ್, ಜಿ.ಬಿಪಲ್ಲವಿ ಸೇರಿದಂತೆ ಹಲವರಿದ್ದರು.