ಧಾರವಾಡ:

ಆಧುನಿಕ ತಂತ್ರಜ್ಞಾನಗಳ ಪ್ರಭಾವದಿಂದಾಗಿ ಕಾಡುಗಳು ನಶಿಸುತ್ತಿದ್ದು ಪ್ರಾಣಿ, ಪಕ್ಷಿಗಳನ್ನು ಸಂರಕ್ಷಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಝೋ ಹಾಗೂ ಟಿವಿಗಳಲ್ಲಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಕೆ.ವಿ. ಹೇಳಿದರು.

ಸಾಮಾಜಿಕ ಅರಣ್ಯ ಇಲಾಖೆ ಹಾಗೂ ರಂಗಾಯಣ ಸಹಯೋಗದಲ್ಲಿ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಿದ್ದ ತಿಂಗಳ ಹಕ್ಕಿ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರವನ್ನು ಸಮತೋಲನದಲ್ಲಿ ಇಡಲು ಪಕ್ಷಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ವಿದ್ಯುತ್‌ ತಂತಿ, ಮೊಬೈಲ್ ಟವರ್‌, ಪರಿಸರ ಮಾಲಿನ್ಯ, ಬೇಟೆಯಾಡುವುದು, ಮರ ಕಡಿಯುವುರಿಂದ ಪಕ್ಷಿಗಳಿಗೆ ಜೀವಿಸಲು ತೊಂದರೆಯಾಗುತ್ತಿದೆ. ಪಕ್ಷಿಗಳು ಮನುಷ್ಯನಂತೆಯೇ ಜೀವಿಸುವ ಪಕ್ಷಿಗಳ ವಿಶೇಷತೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲಾಗುತ್ತಿದೆ. ಆದ್ದರಿಂದ ಮಕ್ಕಳು ಪ್ರಾಣಿ-ಪಕ್ಷಿಗಳ ಕುರಿತು ಮಾಹಿತಿ ಪಡೆದು ಅವುಗಳನ್ನು ಉಳಿಸಿ, ಜೀವಿಸಲು ಸಹಾಯ ಮಾಡಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಪರಿಸರದಲ್ಲಿ ಒಂದಕ್ಕೊಂದು ಸಂಬಂಧ ಹೊಂದಿದ ಜೀವ ವೈವಿಧ್ಯತೆಯ ಸರಪಳಿ ವ್ಯವಸ್ಥೆ ಇದ್ದು ತಮ್ಮ ಅನುಕೂಲಕ್ಕಾಗಿ ಮನುಷ್ಯ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಆದರೆ, ಪ್ರಾಣಿ-ಪಕ್ಷಿಗಳು ಪರಿಸರವನ್ನು ಸಂರಕ್ಷಣೆ ಮಾಡುತ್ತವೆ. ಆದ್ದರಿಂದ ಪಕ್ಷಿಗಳ ಕುರಿತು ತಿಳಿದುಕೊಂಡು ಅವುಗಳಿಗೆ ಹಾನಿ ಮಾಡದೆ ಅವುಗಳಿಗೆ ಸಿಗಬೇಕಾದ ಮೂಲಭೂತ ಆಹಾರ, ನೀರು ಹಾಗೂ ಪ್ರೀತಿ ನೀಡಿದರೆ, ಅವು ನಮಗೆ ಪ್ರತಿನಿತ್ಯ ಕೃತಜ್ಞತೆ ಸಲ್ಲಿಸುತ್ತವೆ ಎಂದರು.


ರಾಜ್ಯ ಪರಿಸರ ಪ್ರಶಸ್ತಿ ವಿಜೇತ ಪ್ರಕಾಶ ಗೌಡರ, ಮಕ್ಕಳಿಗೆ ಪಕ್ಷಿಗಳ ಕುರಿತು ಉಪನ್ಯಾಸ ನೀಡಿದರು. ಈ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಕುಮಾರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ ಹಿರೇಮಠ, ವಲಯ ಅರಣ್ಯಾಧಿಕಾರಿ ಸ್ನೇಹಾ ಕಂಬಳಿ, ಚಿಣ್ಣರಮೇಳದ ಸಂಚಾಲಕ ಅರುಣಕುಮಾರ ಮೇದಾರ, ತರಬೇತುದಾರರಾದ ರಾಜ್ ಕವಡೆನವರ, ಸಾಮಾಜಿಕ ಅರಣ್ಯ ಇಲಾಖೆ ಹಾಗೂ ರಂಗಾಯಣ ಸಿಬ್ಬಂದಿ, ರೆಪರ್ಟರಿ ಕಲಾವಿದರು, ಸುನಂದಾ ನಿಂಬನಗೌಡರ ಇದ್ದರು.