ಕನ್ನಡಪ್ರಭ ವಾರ್ತೆ ಉಡುಪಿಶತಮಾನ ಕಂಡ ಪ್ರಖಂಡ ವಿದ್ವಾಂಸ, ಪ್ರವಚನಕಾರ, ಲೇಖಕ, ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಜೀವನವನ್ನಾಧರಿಸಿದ ‘ಇಂದು ಎನಗೆ ಗೋವಿಂದ’ ಚಲನಚಿತ್ರದ ವಿಶೇಷ ಪ್ರದರ್ಶನವನ್ನು ಅವರ ಜನ್ಮದಿನ ಪ್ರಯುಕ್ತ ಸೋಮವಾರ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಗಮಿಸಿ ಚಿತ್ರ ವೀಕ್ಷಿಸಿ, ಹೃತ್ಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಿದರು.ಪುತ್ತಿಗೆ ಶ್ರೀಪಾದರುಗಳು, ಬನ್ನಂಜೆ ಗೋವಿಂದಾಚಾರ್ಯರು ಭಾರತೀಯ ಜ್ಞಾನಪರಂಪರೆಯ ಮಹೋನ್ನತ ಪ್ರತಿನಿಧಿಗಳು. ವೇದ, ವೇದಾಂತ, ಭಾರತೀಯ ತತ್ತ್ವಶಾಸ್ತ್ರ ಮತ್ತು ಸನಾತನ ಸಂಸ್ಕೃತಿಯ ಪ್ರಚಾರಕ್ಕಾಗಿ ಅವರು ಸಲ್ಲಿಸಿರುವ ಸೇವೆ ಅನನ್ಯ. ಇಂತಹ ಮಹನೀಯರ ಜೀವನವನ್ನು ಚಿತ್ರರೂಪದಲ್ಲಿ ದಾಖಲಿಸಿರುವುದು ಸಮಾಜಕ್ಕೆ ಶಾಶ್ವತ ಪ್ರೇರಣೆಯಾಗಲಿದೆ. ವಿಶೇಷವಾಗಿ ಯುವಜನತೆ ಈ ಚಿತ್ರವನ್ನು ನೋಡಿ ಭಾರತೀಯ ಶಾಸ್ತ್ರ, ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಅಭಿಮಾನ ಬೆಳೆಸಿ, ಸಮಾಜಮುಖಿ ಜೀವನಕ್ಕೆ ಸ್ಫೂರ್ತಿ ಪಡೆಯಲಿ ಎಂದು ಹಾರೈಸಿದರು.ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆದ ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ನವತಿ ಸಂಭ್ರಮದ ಸಮಾರೋಪ ಸಮಾರಂಭವೂ ಅತ್ಯಂತ ವೈಭವದಿಂದ ನೆರವೇರಿತು. ವಿವಿಧ ಮಠಾಧೀಶರು, ಗಣ್ಯ ವಿದ್ವಾಂಸರು ಭಾಗವಹಿಸಿದ್ದರು.