ಬಳ್ಳಾರಿ: ತೆರಿಗೆ ಬಾಕಿ ಉಳಿಸಿಕೊಂಡಿದ್ದ ನಗರದ ಸಂಗಮ ವೃತ್ತದಲ್ಲಿರುವ ಎಸ್‌ಎಲ್‌ಎನ್‌ ಮಾಲ್ ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಬೀಗ ಹಾಕಿದ್ದಾರೆ.ಕಳೆದ ನಾಲ್ಕು ವರ್ಷಗಳಿಂದ ತೆರಿಗೆ ಹಣ ಪಾವತಿಸಿರಲಿಲ್ಲ. ₹2.70 ಕೋಟಿಗೂ ಅಧಿಕ ತೆರಿಗೆ ಹಣ ಬಾಕಿ ಇತ್ತು. ಈ ಸಂಬಂಧ ಈಗಾಗಲೇ ಅನೇಕ ಬಾರಿ ತಿಳಿಸಿದ್ದಾಗ್ಯೂ ಮಾಲ್‌ನ ಮಾಲೀಕರು ತೆರಿಗೆ ಹಣ ಕಟ್ಟಲಿಲ್ಲ. ನೊಟೀಸ್‌ಗೆ ಸ್ಪಂದಿಸಿರಲಿಲ್ಲ. ಹೀಗಾಗಿ ಮಾಲ್‌ಗೆ ಬೀಗ ಹಾಕಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ವರ್ಷವೂ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಾಲ್‌ ನ ಒಂದು ಸಿನಿಮಾ ಥಿಯೇಟರ್‌ಗೆ ಬೀಗ ಜಡಿಯಲಾಗಿತ್ತು. ಬಳಿಕ ಒಂದಷ್ಟು ತೆರಿಗೆ ನೀಡಿ ಉಳಿದ ಮೊತ್ತವನ್ನು ಪಾವತಿಸುವುದಾಗಿ ಮಾಲ್‌ನ ಮಾಲೀಕರು ತಿಳಿಸಿದ್ದರು. ಆದರೆ, ಬಳಿಕ ತೆರಿಗೆ ಕಟ್ಟಲಿಲ್ಲ. ತೆರಿಗೆ ಕಟ್ಟುವ ಸಂಬಂಧ ಮೂರು ನೊಟೀಸ್ ನೀಡಿದರೂ ಪ್ರತಿಕ್ರಿಯಿಸಲಿಲ್ಲ. ಈವರ್ಷದ ಮಾರ್ಚ್ ತಿಂಗಳು ಪೂರ್ಣಗೊಂಡರೂ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಾಲ್‌ಗೆ ಬೀಗ ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಪಾಲಿಕೆಗೆ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡವರ ವಿರುದ್ಧ ಕ್ರಮ ಜರುಗಿಸಲು ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದು, ಇನ್ನು ಮುಂದೆ ಬೀಗ ಜಡಿಯುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿದು ಬಂದಿದೆ. ನಗರದ ಅನೇಕರು ಪಾಲಿಕೆಗೆ ಕಟ್ಟಬೇಕಾದ ಕೋಟ್ಯಂತರ ರು.ಗಳ ತೆರಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದು ಉಳಿದವರಿಗೂ ಬಿಸಿ ಮುಟ್ಟಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.ಬಾಕ್ಸ್‌:ಮಾಲ್‌ಗೆ ಬೀಗ ಹಾಕದಂತೆ ರಾಜಕೀಯ ಒತ್ತಡ?ನಗರದ ಎಸ್‌ಎಲ್‌ಎನ್ ಮಾಲ್‌ ಗೆ ಬೀಗ ಹಾಕದಂತೆ ಪಾಲಿಕೆ ಕೆಲ ಸದಸ್ಯರು ಒತ್ತಡ ತಂದಿದ್ದಾರೆ. ನಮ್ಮ ಗಮನಕ್ಕೆ ತರದೇ ಬೀಗ ಹಾಕಿದ್ದು ಎಷ್ಟು ಸರಿ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.ಪಾಲಿಕೆ ಸಾಮಾನ್ಯ ಸಭೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಕಿ ಇರುವ ತೆರಿಗೆಯನ್ನು ಪಾಲಿಕೆ ಸಿಬ್ಬಂದಿ ಸಂಗ್ರಹಿಸುತ್ತಿಲ್ಲ ಎಂದು ಆರ್ಭಟಿಸುವ ಕೆಲವರು ತೆರಿಗೆ ಕಟ್ಟದ ಮಾಲ್‌ಗೆ ಬೀಗ ಹಾಕಿದ್ದನ್ನು ಪ್ರಶ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಇತ್ತೀಚೆಗೆ ಪಾಲಿಕೆ ಸಿಬ್ಬಂದಿ ಹಾಗೂ ಸಂಚಾರ ಠಾಣೆ ಪೊಲೀಸರ ಜೊತೆಗೂಡಿ ಫುಟ್‌ಪಾತ್ ತೆರವು ಮಾಡಿದ್ದಾಗ್ಯೂ ಪಾಲಿಕೆ ಸಿಬ್ಬಂದಿ ತಗಾದೆ ತೆಗೆದಿದ್ದಾರೆ. ಬಡವರು ಫುಟ್‌ಪಾತ್ ಮೇಲೆ ಹಾಕಿಕೊಳ್ಳಲಿ ಬಿಡಿ ಎಂದು ವಾದ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬಳ್ಳಾರಿ ಅಭಿವೃದ್ಧಿಯ ಬಗ್ಗೆ ಮಾತನಾಡಬೇಕಾದವರೇ ಪಾಲಿಕೆ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಯಾಗುವುದು ಎಷ್ಟು ಸರಿ ? ಎಂಬ ಪ್ರಶ್ನೆ ಮೂಡಿದೆ.

ನಾಲ್ಕೈದು ವರ್ಷಗಳಿಂದ ತೆರಿಗೆ ಬಾಕಿ ಕಟ್ಟದ ಹಿನ್ನಲೆಯಲ್ಲಿ ಎಸ್‌ಎಲ್ಎನ್ ಮಾಲ್‌ಗೆ ಬೀಗ ಹಾಕಲಾಗಿದೆ. ಮತ್ತೊಂದು ನೊಟೀಸ್ ನೀಡಲಾಗುವುದು. ಅದಕ್ಕೂ ಸ್ಪಂದಿಸದೇ ಹೋದರೆ ಮುಂದಿನ ಹಂತದ ಕ್ರಮವಾಗಿ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎನ್ನುತ್ತಾರೆ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ.