ಕನ್ನಡಪ್ರಭ ವಾರ್ತೆ ಉಡುಪಿ
ಉಪಾಯಕಾರಿ ಉದ್ಯೋಗದಲ್ಲಿ ತೊಡಗಿರುವ ಅಸಂಘಟಿತ ಮೀನುಗಾರ ಕಾರ್ಮಿಕರಿಗೆ ಇಎಸ್‌ಐ ಹಾಗೂ ಆರೋಗ್ಯ ವಿಮೆ ಸೌಲಭ್ಯಗಳನ್ನು ನೀಡುವ ಉದ್ದೇಶದಿಂದ ರಾಷ್ಟ್ರೀಯ ಮೀನುಗಾರರ ಸಂಘಟನೆ, ಸೇವಕ್ ಮಿತ್ರ ಸಂಸ್ಥೆ ಮತ್ತು ಇಎಸ್‌ಐ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮೀನುಗಾರರ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಸುಣಗಾರ್ ತಿಳಿಸಿದ್ದಾರೆ.ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಸ್ತುತ ಅಸಂಘಟಿತ ಮೀನುಗಾರ ಕಾರ್ಮಿಕರಿಗೆ ಯಾವುದೇ ವಿಮೆ, ಪರಿಹಾರ ಇತ್ಯಾದಿ ಭದ್ರತೆಗಳು ದೊರೆಯುತ್ತಿಲ್ಲ, ಆದ್ದರಿಂದ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳ ಜೊತೆ ಆಗಸ್ಟ್ 20ಕ್ಕೆ ನಂತರ ಸಭೆ ನಡೆಸಿ, ಅಗತ್ಯ ಸೌಲಭ್ಯಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಹೇಳಿದರು.ಪ್ರಸ್ತುತ ಮೀನುಗಾರರ ಸಹಕಾರ ಸಂಘದಲ್ಲಿ ನೋಂದಣಿ ಮಾಡಿಕೊಂಡಿರುವವರನ್ನು ಮಾತ್ರ ಮೀನುಗಾರರು ಎಂದು ಪರಿಗಣಿಸಲಾಗುತ್ತಿದೆ. ಮೀನುಗಾರಿಕೆಯನ್ನೇ ಜೀವನೋಪಾಯ ಮಾಡಿಕೊಂಡಿರುವ ನೈಜ ಮೀನುಗಾರರನ್ನೂ ಗುರುತಿಸುವ ಅವರಿಗೆ ಸರ್ಕಾರದ ವತಿಯಿಂದಲೇ ಗುರುತಿನ ಚೀಟಿ ವಿತರಿಸುವ ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ತಿಳಿಸಿದರು.ಮೀನುಗಾರರಿಗೆ ಪ್ರಾತಿನಿಧ್ಯ:
ರಾಜ್ಯದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆ ನಡೆಯುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರರ ಸಂಖ್ಯೆ ಹೆಚ್ಚಿರುವುದರಿಂದ ಈ ಸ್ಥಾನಗಳಿಗೆ ಮೀನುಗಾರ ಸಮುದಾಯದವರನ್ನೇ ಆರಿಸಬೇಕು ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ ಎಂದವರು ಹೇಳಿದರು.ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಮಹಿಳಾ ಅಧ್ಯಕ್ಷೆ ನಿರೀಕ್ಷಾ ಮೆಂಡನ್, ಪ್ರಮುಖರಾದ ಉಪೇಂದ್ರ ಮೆಂಡನ್, ಮಹಾಬಲ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.