ಸಾರಾಂಶ
ಮುಂಡರಗಿ: ಮುಂಡರಗಿ ಅನ್ಮೋಲ್ ಯೋಗ ಕೇಂದ್ರದಲ್ಲಿ ಡಾ. ಮಂಗಳಾ ಇಟಗಿ ನಡೆಸಿದ 21 ದಿನಗಳ ಮಕ್ಕಳ ಶಿಬಿರದಲ್ಲಿ ಮಕ್ಕಳ ಸೃಜನಶೀಲ ಕಲಿಕೆಗೆ ಪೂರ್ಣ ಅವಕಾಶ ನೀಡುವುದರೊಂದಿಗೆ ಆರೋಗ್ಯ ಮತ್ತು ಆಹಾರದ ಸಂಸ್ಕಾರ ನೀಡುವ ಕಾರ್ಯ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಖ್ಯಾತ ವೈದ್ಯ ಡಾ.ಅನ್ನದಾನಿ ಮೇಟಿ ಹೇಳಿದರು.
ಅವರು ಇತ್ತೀಚೆಗೆ ಪಟ್ಟಣದ ಅನ್ಮೋಲ್ ಯೋಗ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರದಲ್ಲಿ ಸಂಘಟಿಸಿದ್ದ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಕ್ಕಳು ಆಧುನಿಕತೆಯ ಸೆಳೆತದಲ್ಲಿ ನಮ್ಮ ಆಹಾರ ಸಂಸ್ಕೃತಿ ಮರೆತು ಜಂಕ್ಸ್ ಫುಡ್ ಕಡೆ ವಾಲುತ್ತಿದ್ದಾರೆ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮಕ್ಕಳಿಗೆ ಬದಲಾದ ಕಾಲಘಟ್ಟದಲ್ಲಿ ಯೋಗ ಶಿಕ್ಷಣ ನೀಡುವುದು ಅಗತ್ಯವಿದೆ ಎಂದರು.
ಸಾಹಿತಿ ಡಾ. ನಿಂಗು ಸೊಲಗಿ ಮಾತನಾಡಿ, ಹಿರಿಯರಾದವರು ಮಕ್ಕಳಿಗೆ ಹೆದರಿಸಿ ಬೆದರಿಸಿ ಒತ್ತಡ ಹೇರಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆದುಕೊಳ್ಳುವಂತೆ ಮಾಡದೆ ಅವರಲ್ಲಿ ಓದಿನ ಅಭಿರುಚಿ ಮೂಡಿಸಿ ಉತ್ಸಾಹದಿಂದ ಪ್ರಯೋಗಶೀಲರಾಗಿ ಕಲಿಕೆಯಲ್ಲಿ ತೊಡಗುವಂತೆ ಉತ್ತೇಜಿಸಬೇಕು. ಮಕ್ಕಳು ಸದಾ ಉತ್ಸಾಹದಿಂದ ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡಲು ಮೊದಲು ಅಭಿರುಚಿ, ಆಸಕ್ತಿ, ಸ್ವಭಾವ ಅರಿತು ಅವರ ಪ್ರತಿಭೆಗೆ ಸೂಕ್ತ ಅವಕಾಶ ನೀಡಿ ಸ್ಪೂರ್ತಿ ತುಂಬುತ್ತಲೇ ಅವರ ಬೆಳವಣಿಗೆಗೆ ಇಂಬು ನೀಡಬೇಕು. ಅನ್ಮೊಲ್ ಯೋಗ ಕೇಂದ್ರದಲ್ಲಿ ಸಂಘಟಿಸಿದ ಈ ಶಿಬಿರ ಇಂಥದಕ್ಕೆಲ್ಲ ಸೂಕ್ತ ಅವಕಾಶ ನೀಡಿದೆ ಎಂಬುದನ್ನು ಮಕ್ಕಳ ಸಾಂಸ್ಕೃತಿಕ ಪ್ರದರ್ಶನ ತೆರೆದಿಟ್ಟಿದೆ ಎಂದರು.ಈ ಸಂದರ್ಭದಲ್ಲಿ ಶಿಕ್ಷಕ ನಾಗಭೂಷಣ ಹಿರೇಮಠ ಎನ್‌ಸಿಸಿ ಅಧಿಕಾರಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲಾಯಿತು. ರಂಗ ನಿರ್ದೇಶಕ ಸತ್ಯಪ್ಪ ಸತ್ಯಮ್ಮನಗುಡಿ, ಸಂಗೀತ ಶಿಕ್ಷಕಿ ಜಯಶ್ರೀ ಅಳವಂಡಿ, ನೃತ್ಯಪಟು ಚಂದ್ರು ಶೀರಿ, ಗಾಯಕರಾದ ಭಾರತಿ ಪತ್ತಾರ, ಮಂದಾರಾ ವಾಸ್ಟರ, ಶಿಕ್ಷಕಿ ಕವಿತಾ ಸಜ್ಜನರ, ಸಹನಾ ಸಿದ್ಲಿಂಗ ಮೊದಲಾದ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.
ಡಾ.ಚಂದ್ರಕಾಂತ ಇಟಗಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ನಿರ್ದೇಶಕಿ ಡಾ. ಮಂಗಳಾ ಚಂದ್ರಕಾಂತ ಇಟಗಿ ಪ್ರಾಸ್ತಾವಿಕವಾಗಿ ಮತನಾಡಿದರು. ಪತಂಜಲಿ ಯೋಗ ಸಮಿತಿಯ ಮಂಜುನಾಥ ಅಳವಂಡಿ, ನಾಗಪ್ಪ ಇಟಗಿ, ಮಕ್ಕಳ ಪಾಲಕರು ಸೇರಿದಂತೆ ಅನೇಕರು ಇದ್ದರು.ಮಕ್ಕಳೇ ಕಾರ್ಯಕ್ರಮ ನಿರೂಪಿಸಿದರು. ಕವಿತಾ ಸಜ್ಜನರ ಸ್ವಾಗತಿಸಿ ವಂದಿಸಿದರು. ನಂತರ ಮಕ್ಕಳಿಂದ ಕಲಾತ್ಮಕ ಯೋಗ ಪ್ರದರ್ಶನ, ಸಮೂಹ ಗೀತಗಾಯನ, ನೃತ್ಯ, ನಾಟಕ, ಜಾದೂ ಪ್ರದರ್ಶನ ಜರುಗಿದವು.