ಪೌರಕಾರ್ಮಿಕರು ತಮ್ಮ ಮಕ್ಕಳನ್ನು ಪೌರ ಕಾರ್ಮಿಕರನ್ನಾಗಿಯೇ ಮಾಡಬೇಕೆಂಬ ಮನೋಭಾವನೆಯಿಂದ ಹೊರರಬೇಕು. ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವುದರೊಂದಿಗೆ ದೇಶದ ಅತ್ಯುನ್ನತ ಪದವಿಧರರನ್ನಾಗಿ ರೂಪಿಸಿ, ತಮ್ಮ ಜೀವನ ಸಾರ್ಥಕಪಡಿಸಿಕೊಳ್ಳಲು ಮುಂದಾಗಬೇಕು ಎಂದು ಪೌರಾಯುಕ್ತೆ ವಿ.ಈರಮ್ಮ ಹೇಳಿದ್ದಾರೆ.
- ಹರಿಹರದಲ್ಲಿ ಪೌರಕಾರ್ಮಿಕರ ದಿನಾಚರಣೆಯಲ್ಲಿ ನಗರಸಭೆ ಪೌರಾಯುಕ್ತೆ ವಿ.ಈರಮ್ಮ ಸಲಹೆ- - - ಕನ್ನಡಪ್ರಭ ವಾರ್ತೆ ಹರಿಹರ
ಪೌರಕಾರ್ಮಿಕರು ತಮ್ಮ ಮಕ್ಕಳನ್ನು ಪೌರ ಕಾರ್ಮಿಕರನ್ನಾಗಿಯೇ ಮಾಡಬೇಕೆಂಬ ಮನೋಭಾವನೆಯಿಂದ ಹೊರರಬೇಕು. ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವುದರೊಂದಿಗೆ ದೇಶದ ಅತ್ಯುನ್ನತ ಪದವಿಧರರನ್ನಾಗಿ ರೂಪಿಸಿ, ತಮ್ಮ ಜೀವನ ಸಾರ್ಥಕಪಡಿಸಿಕೊಳ್ಳಲು ಮುಂದಾಗಬೇಕು ಎಂದು ಪೌರಾಯುಕ್ತೆ ವಿ.ಈರಮ್ಮ ಹೇಳಿದರು.ನಗರಸಭೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು. ನಗರದ ಬೀದಿಬೀದಿ, ಗಲ್ಲಿಗಳಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುವ ಪೌರಕಾರ್ಮಿಕ ಬಂಧುಗಳು ಸ್ವಚ್ಛತಾ ಸೇನಾನಿಗಳಿದ್ದಂತೆ. ನಿತ್ಯ ಬೆಳಗಾಗುವುದಕ್ಕೂ ಮುನ್ನವೇ ಪೌರಕಾರ್ಮಿಕರು ಎದ್ದು, ಚಳಿ, ಗಾಳಿ-ಮಳೆಯನ್ನು ಲೆಕ್ಕಿಸದೇ ನಗರದ ಬೀದಿ ಬೀದಿಗಳನ್ನು ಸ್ವಚ್ಛಗೊಳಿಸುವ ಕಾಯಕದಲ್ಲಿ ನಿರತರಾಗಿರುತ್ತಾರೆ. ಅಂಥ ಮಹತ್ವದ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರ ಸೇವೆ ಸ್ಮರಿಸಲೆಂದೇ ಸರ್ಕಾರ ಸೆಪ್ಟೆಂಬರ್ 23 ಅನ್ನು ಪೌರ ಕಾರ್ಮಿಕರ ದಿನವಾಗಿ ಆಚರಿಸಲು ನಿರ್ಧರಿಸಿರುವುದು ಶ್ಲಾಘನಿಯ ಎಂದರು.
ನಿತ್ಯ ನಗರದ ಬೀದಿಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು. ಕುಟುಂಬದ ಸರ್ವ ಸದಸ್ಯರ ಆರೋಗ್ಯ ಭಾಗ್ಯದ ಕಡೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳು ಐಎಎಸ್, ಐಪಿಎಸ್, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಪೌರ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ರಮೇಶ್ ಮಾತನಾಡಿ, ಪೌರಕಾರ್ಮಿಕರ ಸಂಘಟನೆಯಲ್ಲಿನ ಭಿನ್ನಾಭಿಪ್ರಾಯ ಅವರ ಬೇಡಿಕೆಗಳಿಗೆ ಹಿನ್ನಡೆಯಾಗಲು ಕಾರಣವಾಗಿದೆ. 2 ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಡಿದಲ್ಲಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ಹೊರಗುತ್ತಿಗೆ ಕಾರ್ಮಿಕರು, ನೇರ ಪಾವತಿ ಕಾರ್ಮಿಕರು, ನೀರುಗಂಟಿಗಳು ಮತ್ತು ಕಸ ಸಂಗ್ರಹಗಾರರು, ವಾಹನ ಚಾಲಕರನ್ನು ಸರ್ಕಾರ ಆದ್ಯತೆ ಮೇರೆಗೆ ಕಾಯಂಗೊಳಿಸಬೇಕೆಂದು ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.
ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಎಂ.ರವಿ ಮಾತನಾಡಿ, ನಗರದ ಹೊರ ಭಾಗದಲ್ಲಿ ನಗರಸಭೆಗೆ ಸೇರಿದ ಸುಮಾರು 8 ಎಕರೆ 30 ಗುಂಟೆ ಜಮೀನಿನಲ್ಲಿ 4 ಎಕರೆ 35 ಗುಂಟೆ ಜಾಗವನ್ನು ಪೌರಕಾರ್ಮಿಕರ ನಿವೇಶನ ಮನೆಗಳಿಗೆ ಮೀಸಲಿಡುತ್ತೇವೆ ಎಂದು ಭರವಸೆ ನೀಡಿದ್ದರು. ಈಗ ಯಾವುದೋ ಒತ್ತಡಕ್ಕೆ ಮಣಿದ ನಗರಸಭೆ ಅಧಿಕಾರಿಗಳು ತಡೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಅದನ್ನು ನಿಲ್ಲಿಸಿ ನಮಗೆ ಅನುಕೂಲ ಮಾಡಿಕೊಡಬೇಕು. ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಬರಲಿದೆ ಎಂದು ಹೇಳಿದರು.ಪೌರ ಸೇವಾ ನೌಕರರ ಸಂಘದ ಹರಿಹರ ಘಟಕದ ಅಧ್ಯಕ್ಷ ಪಿ.ಎಚ್.ಸದಾಶಿವ ಪೈ, ಕಚೇರಿಯ ವ್ಯವಸ್ಥಾಪಕಿ ಜಯಲಕ್ಷ್ಮೀ, ಲೆಕ್ಕಾಧಿಕಾರಿ ನಾಗರಾಜ ಬಿ. ಬಿಲ್ಲಾಳ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ, ಕಿರಿ ಆರೋಗ್ಯ ನಿರೀಕ್ಷಕರಾದ ಸಬ್ರಿನ್‌ತಾಜ್, ವೀರೇಶ್, ದಪೇದಾರ್‌ಗಳಾದ ಹನುಮಂತಪ್ಪ ಪೂಜಾರ, ಬಿ.ದಯಾನಂದ್, ಸೋಮನಾಥ್, ಸೌಭಾಗ್ಯಮ್ಮ, ಹನುಮಂತಪ್ಪ ಡಿ ಎನ್, ಪಿ.ಎಚ್.ರಾಮಕೃಷ್ಣಪ್ಪ, ಬಿ.ಹೆಚ್.ಮರಿದೇವ, ರಾಮಕುಮಾರ್ ಕೊಂಡಜ್ಜಿ, ಜಿ.ಕೆ. ಪ್ರವೀಣ್ ಕುಮಾರ್, ಎ.ಆರ್. ತಮ್ಮಯ್ಯ, ಜಗದೀಶ ಅಡ್ಡರ, ಪೂಜಾ, ರೂಪ, ನೇತ್ರಾವತಿ, ಹುಚ್ಛಂಗೆಮ್ಮ ಸೇರಿದಂತೆ ಪೌರಕಾರ್ಮಿಕ, ಸಿಬ್ಬಂದಿ ಉಪಸ್ಥಿತರಿದ್ದರು.
- - --24ಎಚ್.ಆರ್.ಆರ್2: ಪೌರಕಾರ್ಮಿಕರ ದಿನ ಕಾರ್ಯಕ್ರಮವನ್ನು ಸಂಘದ ಜಿಲ್ಲಾ ಅಧ್ಯಕ್ಷ ಎನ್.ರಮೇಶ್ ಉದ್ಘಾಟಿಸಿದರು.