ಸಾರಾಂಶ
ಗದಗ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದ ಮಕ್ಕಳು ಬದುಕನ್ನು ಅರಿತವರು. ಇಂತಹ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರದ ಉಚಿತ ಯೋಜನೆಗಳು ಅನುಷ್ಠಾನಗೊಂಡಿದ್ದು, ಇವುಗಳೊಂದಿಗೆ ಸಂಘ-ಸಂಸ್ಥೆಗಳು ಕೈ ಜೋಡಿಸಿ ಮಕ್ಕಳ ಉತ್ತಮ ಭವಿಷ್ಯಕ್ಕೆ ಸಹಕರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಶೆಟ್ಟೆಪ್ಪನವರ ಹೇಳಿದರು.ನಗರದ ಸರ್ಕಾರಿ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆ ನಂ.2ರಲ್ಲಿ ಮಂಗಳವಾರ ಇನ್ನರ್‌ವೀಲ್ ಕ್ಲಬ್ ವತಿಯಿಂದ 2025-26ನೇ ಸಾಲಿಗೆ ಶಹರದ ಸರ್ಕಾರಿ ಶಾಲೆಗಳ ದತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗದಗ-ಬೆಟಗೇರಿ ಇನ್ನರ್ ವೀಲ್ ಕ್ಲಬ್ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಲವಾರು ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದ್ದು, ಬಡ ಹಾಗೂ ಪ್ರತಿಭಾನ್ವಿತ ಮಕ್ಕಳನ್ನು ದತ್ತು ಪಡೆದು ಅವರ ಶೈಕ್ಷಣಿಕ ಅಭಿವೃದ್ಧಿಗೆ ಕಾರ್ಯನಿರತರಾಗಿರುವುದು ಅಭಿನಂದನೀಯ ಎಂದರು.ಸಂಪನ್ಮೂಲ ವ್ಯಕ್ತಿ ಮೊಹಮ್ಮದ್‌ಶಫಿ ಯರಗುಡಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣದ ಅವಶ್ಯಕತೆಯಿದ್ದು, ವಿದ್ಯಾರ್ಥಿಗಳು ನ್ಯಾಯ, ನೀತಿ, ಮಾನವೀಯತೆ, ಆದರ್ಶ, ಸಹಕಾರ ಮನೋಭಾವನೆಗಳನ್ನು ಹೊಂದುವಲ್ಲಿ ಶಿಕ್ಷಣ ಇಲಾಖೆಯೊಂದಿಗೆ ಸಂಘ-ಸಂಸ್ಥೆಗಳು ಜೊತೆಗೂಡಿ ಮಕ್ಕಳಲ್ಲಿ ಮೌಲ್ಯ ಶಿಕ್ಷಣವನ್ನು ನೀಡಬೇಕಿದೆ ಎಂದರು.ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಅಶ್ವಿನಿ ಜಗತಾಪ ಮಾತನಾಡಿ, ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಧ್ಯೇಯದೊಂದಿಗೆ ಹೆಣ್ಣು ಮಗುವಿನ ಶೈಕ್ಷಣಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಈ ಶಾಲೆಯನ್ನು ದತ್ತು ಪಡೆಯಲಾಗಿದೆ. ಮಕ್ಕಳಿಗೆ ವಿವಿಧ ಚಟುವಟಿಕೆ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಗುವುದು. ಶಾಲೆಯ ಅಗತ್ಯತೆಗಳನ್ನು ಪೂರೈಸಲು ಪ್ರಯತ್ನಿಸಲಾಗುತ್ತಿದೆ ಎಂದರು.ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ಶಾಲೆಗಳ ಫಲಿತಾಂಶ, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ, ಗುಣಾತ್ಮಕ ಶಿಕ್ಷಣ, ಫಲಪ್ರದವಾದ ಕಲಿಕೆ ಏರಿಕೆಯಾಗಿದ್ದು, ಇಲಾಖೆಯೊಂದಿಗೆ ಸಂಘ-ಸಂಸ್ಥೆಗಳು ಕೈ ಜೋಡಿಸಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮುಂದಾಗಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಎಫ್.ಜೆ.ದಲಭಂಜನ ಮಾತನಾಡಿದರು. ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಶಿಲ್ಪಾ ಅಕ್ಕಿ, ವಿ.ಕೆ.ಪಾಟೀಲ, ವಿದ್ಯಾ ಕಬ್ಬರಗಿ, ಇಂದಿರಾಬಾಯಿ, ಸಿ.ಎಸ್.ನಾಗನೂರ, ಗೌರಮ್ಮ ಉಪಸ್ಥಿತರಿದ್ದರು.
ಕ್ಲಬ್‌ನ ಖಜಾಂಚಿ ಪುಷ್ಪಾ ಭಂಡಾರಿ ಪ್ರಾರ್ಥಿಸಿದರು. ಎಡಿಟರ್ ವೀಣಾ ಕಾವೇರಿ ಸ್ವಾಗತಿಸಿದರು. ಎಚ್.ಬಿ.ಬಂಡಿವಡ್ಡರ ನಿರೂಪಿಸಿದರು. ಕ್ಲಬ್‌ನ ಸಿ.ಪಿ.ಸಿ.ಸಿ ಮೀನಾಕ್ಷಿ ಕೊರವಣ್ಣವರ ವಂದಿಸಿದರು.