ಸಾರಾಂಶ
ಜೋಯ್ಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಂ ಶಿಕ್ಷಕರನ್ನು ನೇಮಿಸುವಂತೆ ಮಕ್ಕಳು ಶಾಲೆಗೆ ಗೈರಾಗುವ ಮೂಲಕ ಪಾಲಕರೊಂದಿಗೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷ ರಾಜು ವೆಳಿಪ್, 31 ಮಕ್ಕಳಿರುವ ನಮ್ಮ ಶಾಲೆಗೆ ಒಬ್ಬರು ಕಾಯಂ ಶಿಕ್ಷಕರಿಲ್ಲ, ಕಳೆದ 3 ತಿಂಗಳ ಹಿಂದೆಯೇ ಶಿಕ್ಷಣ ಇಲಾಖೆ, ಜಿಲ್ಲಾಧಿಕಾರಿ, ಎಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಕಾಯಂ ಶಿಕ್ಷಕರನ್ನು ನಿಯೋಜಿಸುವಂತೆ ಆಗ್ರಹಿಸಲಾಗಿದೆ. ಆದರೆ, ಈ ವರೆಗೂ ಕ್ರಮಕೈಗೊಂಡಿಲ್ಲ. ಕಾಯಂ ಶಿಕ್ಷಕರನ್ನು ನೇಮಿಸುವವರೆಗೆ ಶಾಲೆಗೆ ಮಕ್ಕಳನ್ನು ಕಳಿಸುವುದಿಲ್ಲ ಪಟ್ಟು ಹಿಡಿದರು.
ಕೆಲ ಶಾಲೆಗಳಲ್ಲಿ ಐದಾರು ಕಾಯಂ ಶಿಕ್ಷಕರಿದ್ದಾರೆ. ಅಂತಹ ಶಾಲೆಗಳ ಓರ್ವ ಶಿಕ್ಷಕರನ್ನು ನಮ್ಮ ಶಾಲೆಗೆ ಕೊಡಬಹುದು. ಶಿಕ್ಷಣ ಇಲಾಖೆಗೆ ನಮ್ಮ ಶಾಲೆಯ ಬಗ್ಗೆ ಕಾಳಜಿ ಇಲ್ಲ, ಚುನಾಯಿತ ಪ್ರತಿನಿಧಿಗಳು, ಶಾಸಕರು ಈ ಬಗ್ಗೆ ಗಮನಹರಿಸಿ ಶಿಕ್ಷಕರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳು ನಮಗೆ ಶಿಕ್ಷಕರನ್ನು ನೀಡಿ, ನಮ್ಮ ಶಿಕ್ಷಣ ಉಳಿಸಿ, ಕಸಿದುಕೊಳ್ಳಬೇಡಿ ಎಂದು ಘೋಷಣೆ ಕೂಗಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಇಒ ಬಶೀರ್ ಅಹಮದ್ ಶೇಖ್, ನಾವು ಸದ್ಯ ಅತಿಥಿ ಶಿಕ್ಷಕರನ್ನು ಮಾತ್ರ ನೇಮಿಸಲು ಸಾಧ್ಯ. ಸರ್ಕಾರದ ಆದೇಶ ಬರುವ ತನಕ ಕಾಯಂ ಶಿಕ್ಷಕರನ್ನು ನೇಮಿಸಲು ಆಗುವುದಿಲ್ಲ ಎಂದು ಪಾಲಕರಿಗೆ ತಿಳಿಸಿದರು
ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರನ್ನು ಬಿಟ್ಟು ಎರಡು ಅಥವಾ ಮೂವರು ಕಾಯಂ ಶಿಕ್ಷಕರು ಇರು ಶಾಲೆಯ ಶಿಕ್ಷಕರನ್ನು ಇಲ್ಲಿಗೆ ತಾತ್ಕಾಲಿಕವಾಗಿ ನಿಯೋಜಿಸಬೇಕು. ಈ ಮೂಲಕ ಇಲ್ಲಿನ ಸಮಸ್ಯೆ ನಿವಾರಿಸಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.