ಸಂವಾದದಲ್ಲಿ ಮಕ್ಕಳ ರಕ್ಷಣಾ ಆಯೋಗದ ಎದುರು ಸಮಸ್ಯೆ ತೋಡಿಕೊಂಡ ಮಕ್ಕಳು

| Published : Jan 19 2025, 02:17 AM IST

ಸಂವಾದದಲ್ಲಿ ಮಕ್ಕಳ ರಕ್ಷಣಾ ಆಯೋಗದ ಎದುರು ಸಮಸ್ಯೆ ತೋಡಿಕೊಂಡ ಮಕ್ಕಳು
Share this Article
  • FB
  • TW
  • Linkdin
  • Email

ಸಾರಾಂಶ

ಶೌಚಾಲಯ ಕೊರತೆ, ಕುಡಿಯುವ ನೀರಿನ ಅಭಾವ, ಊಟಕ್ಕೆ ಕುಳಿತುಕೊಳ್ಳಲು ಜಾಗವಿಲ್ಲ. ಶಾಲೆಯಿಂದ ಬಹಳಷ್ಟು ಮಕ್ಕಳು ಹೊರಗೆ ಅಲೆದಾಡುತ್ತಾರೆ.

ಹರಪನಹಳ್ಳಿ: ಶೌಚಾಲಯ ಕೊರತೆ, ಕುಡಿಯುವ ನೀರಿನ ಅಭಾವ, ಊಟಕ್ಕೆ ಕುಳಿತುಕೊಳ್ಳಲು ಜಾಗವಿಲ್ಲ. ಶಾಲೆಯಿಂದ ಬಹಳಷ್ಟು ಮಕ್ಕಳು ಹೊರಗೆ ಅಲೆದಾಡುತ್ತಾರೆ... ಹೀಗೆ ಮಕ್ಕಳು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿದರ ಕೋಸಂಬಿ ಎದುರು ತಮ್ಮ ಶಾಲೆಗಳಲ್ಲಿನ ಸಮಸ್ಯೆಗಳನ್ನು ಹೇಳಿಕೊಂಡ ಪ್ರಸಂಗ ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.ಮಕ್ಕಳೊಂದಿಗೆ ಮುಕ್ತ ಸಂವಾದ ಹಾಗೂ ಮಕ್ಕಳಿಗೆ ಸಂಬಂಧಿಸಿದ ಕಾಯ್ದೆಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಸಂವಾದದಲ್ಲಿ ಪಾಲ್ಗೊಂಡ ಮಕ್ಕಳು ಮೇಲಿನಂತೆ ಸಮಸ್ಯೆಗಳನ್ನು ನಿವೇದಿಸಿಕೊಂಡರು.

ಮಕ್ಕಳ ಸಮಸ್ಯೆಗೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಲೇಪಾಕ್ಷಪ್ಪ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿನಿ ರಕ್ಷಿತಾ ಹೇಳುವುದು ಸತ್ಯವಿದೆ. ಶೌಚಾಲಯ ಕೊರತೆ ಇದೆ. ಕೆಕೆಆರ್‌ಡಿಬಿಯಲ್ಲಿ ಶಾಸಕರು ಅನುದಾನ ನೀಡಿದ್ದಾರೆ, ಶೀಘ್ರ ನಿರ್ಮಾಣ ಆಗುತ್ತದೆ ಎಂದರು.

ಇನ್ನೊಬ್ಬ ವಿದ್ಯಾರ್ಥಿನಿ ಸೃಷ್ಟಿ ಹೇಳುವಂತೆ, ಬಾಲಕಿಯರ ಪ್ರೌಢ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಈಗಾಗಲೇ ಕಾಮಗಾರಿಗೆ ಶಂಕುಸ್ಥಾಪನೆ ಆಗಿದೆ ಎಂದು ಬಿಇಒ ಹೇಳಿದರು. ಆಯೋಗದ ಸದಸ್ಯ ಶಶಿಧರ ಕೋಸಂಬಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಕ್ರಮ ವಹಿಸಿ ಎಂದರು.

ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಪರಿಶೀಲಿಸಲಾಗುವುದು ಎಂದರು. ಸ.ಪ.ಪೂ. ಕಾಲೇಜಿನ ಪ್ರೌಡ ಶಾಲಾ ವಿಭಾಗದಲ್ಲಿ ನಿವೇದಿತಾ ಎಂಬ ವಿದ್ಯಾರ್ಥಿನಿ ಕುಡಿಯುವ ನೀರಿನ ಸಮಸ್ಯೆ, ನೀರು ಪಾಚಿ ಇರುತ್ತದೆ ಎಂದಾಗ ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಪರಿಶೀಲಿಸಿ ಸರಿಪಡಿಸುತ್ತೇವೆ ಎಂದು ಉತ್ತರಿಸಿದರು.

ಸ.ಪ.ಪೂ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಊಟಕ್ಕೆ ಕುಳಿತುಕೊಳ್ಳಲು ಜಾಗ ಸಾಲುತ್ತಾ ಇಲ್ಲ ಎಂದಾಗ ಬಿಇಒ ಲೇಪಾಕ್ಷಪ್ಪ ಪರಿಶೀಲಿಸುತ್ತೇವೆ ಎಂದರು.

ಸ.ಪ.ಪೂ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ತರಗತಿಗೆ ಕಿಡಕಿಯಿಂದ ಕೆಲವರು ಕಲ್ಲು ಎಸೆಯುತ್ತಾರೆ, ಶಿಕ್ಷಕರಿಗೆ ಬೈಯುತ್ತಾರೆ ಎಂದು ಇನ್ನೊಬ್ಬ ವಿದ್ಯಾರ್ಥಿ ಹೇಳಿದ. ಆಗ ತಹಶೀಲ್ದಾರ ಬಿ.ವಿ.ಗಿರೀಶಬಾಬು, ಮುಖ್ಯ ಶಿಕ್ಷಕರಿಂದ ಪತ್ರ ಕಳಿಸಿ ನಾನು ಅದನ್ನು ಪೊಲೀಸ್‌ ವೃತ್ತ ನಿರೀಕ್ಷಕರಿಗೆ ಕಳಿಸಿ ಕ್ರಮಕ್ಕೆ ಕೋರುತ್ತೇನೆ ಎಂದು ಹೇಳಿದರು.

ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವಾಗ ಪೊಲೀಸ್‌ ವೆರಿಫಿಕೇಶನ್‌ ಆಗಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬಿ ಸೂಚಿಸಿದರು.

ಬಸ್‌ ಕೊರತೆಯಿಂದ ಶಿಕ್ಷಣದಿಂದ ಮಕ್ಕಳು ವಂಚಿತವಾಗಬಾರದು. ಶಾಲೆಗಳಿಗೆ ಬರಲು ಸೂಕ್ತ ಬಸ್‌ ಒದಗಿಸಲು ಡಿಪೋ ವ್ಯವಸ್ಥಾಪಕಿಗೆ ಸೂಚಿಸಿದರು.

ಮಕ್ಕಳು ತಮ್ಮ ಏನೇ ಸಮಸ್ಯೆಗಳಿದ್ದರೆ 1098ಕ್ಕೆ ಕರೆ ಮಾಡಿ ತಿಳಿಸಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬಿ ಮಕ್ಕಳಿಗೆ ಸಲಹೆ ನೀಡಿದರು.