ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ 1295 ಪ್ರೌಢಶಾಲೆಗಳ ಮಕ್ಕಳು ಈ ಕಲೋತ್ಸವ ಮತ್ತು ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ತಮ್ಮ ಸುಪ್ತ ಪ್ರತಿಭೆ ಅನಾವರಣ ಮಾಡಲಿದ್ದಾರೆ
ಕಾರಟಗಿ: ನಾಡಿನ ಪ್ರೌಢಶಾಲೆ ಮಕ್ಕಳ ಸುಪ್ತ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಪ್ರತಿ ವರ್ಷ ನಡೆಯುವ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ-26 ಮಕ್ಕಳ ಎರಡು ದಿನಗಳ ಕಲೆ ಕಲರವ ಇಂದಿನಿಂದ ಭತ್ತ ನಾಡು ವೇದಿಕೆಯಾಗಲಿದೆ.
ನಾಡಿನ ವಿವಿಧಡೆ ನಡೆದ ಕ್ಲಸ್ಟರ್, ಬ್ಲಾಕ್, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಕೊನೆ ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದ್ದು, ಈ ರಾಜ್ಯ ಮಟ್ಟದ ಸ್ಪರ್ಧೆ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರದಿಂದ ಕಾರಟಗಿಯಲ್ಲಿ ನಡೆಯಲಿದೆ. ಫೆ. 7 ಮತ್ತು 8ರಂದು ಎರಡು ದಿನಗಳ ಕಾಲ ಕಲೋತ್ಸವ 2026 ನಡೆಯಲಿದೆ. ರಾಜ್ಯ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧುಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಶಾಸಕರು ಮತ್ತು ಸಂಸದರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ 1295 ಪ್ರೌಢಶಾಲೆಗಳ ಮಕ್ಕಳು ಈ ಕಲೋತ್ಸವ ಮತ್ತು ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ತಮ್ಮ ಸುಪ್ತ ಪ್ರತಿಭೆ ಅನಾವರಣ ಮಾಡಲಿದ್ದಾರೆ. ಒಟ್ಟು ವಿಭಿನ್ನ, ವೈಯಕ್ತಿಕ ಸ್ಪರ್ಧೆ, ಮೂರು ಗುಂಪು ಸ್ಪರ್ಧೆ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯಾ ಸ್ಪರ್ಧೆಗಳಲ್ಲಿ ಪರಿಣಿತ ಶಿಕ್ಷಕರು ಮತ್ತು ಕಲಾವಿದರು ನಿರ್ಣಾಯಕರಾಗಿ ಭಾಗವಹಿಸಿದ್ದಾರೆ ಎಂದು ಕಾರ್ಯಕ್ರಮದ ರೂವಾರಿ ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೋಮಶೇಖರ ಗೌಡ ವಿವರಿಸಿದರು.
ಕಳೆದ ವಾರದಿಂದ ಜಿಲ್ಲಾಡಳಿತದ ನಿರ್ದೇಶನದಂತೆ ಸ್ಪರ್ಧೆ ನಡೆಸಲು ಇಲ್ಲಿನ ಸಿದ್ದೇಶ್ವರ ರಂಗಮಂದಿರದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಸ್ಪರ್ಧೆ ಮತ್ತು ಕಾರ್ಯಕ್ರಮ ಸುಗಮವಾಗಿ ಸಾಗಲು ಈಗಾಗಲೆ ಒಟ್ಟು 18 ಉಪಸಮಿತಿ ರಚಿಸಲಾಗಿದೆ. ಶುಕ್ರವಾರ ಸಂಜೆಯಿಂದ ನಾಡಿನ ವಿವಿಧ ಪ್ರದೇಶಗಳಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ತಂಡ ಕಾರಟಗಿ ಪಟ್ಟಣಕ್ಕೆ ಆಗಮಿಸಿದ್ದು ಅವರಿಗೆಲ್ಲ ಸೂಕ್ತ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಡಿಡಿಪಿಐ ವಿವರಿಸಿದರು.ಐದು ವೇದಿಕೆ: ಇಲ್ಲಿನ ಸಿದ್ದೇಶ್ವರ ರಂಗಮಂದಿರದಲ್ಲಿ ಮುಖ್ಯ ವೇದಿಕೆ ನಿರ್ಮಿಸಲಾಗಿದ್ದೆ. ಉಳಿದಂತೆ ಒಟ್ಟು ಐದು ವೇದಿಕೆಗಳನ್ನು ವಿವಿಧ ಕಾರ್ಯಕ್ರಮ ನಡೆಸಲು ನಿರ್ಮಿಸಲಾಗಿದೆ. ಮರ್ಲಾನಹಳ್ಳಿಯ ಸ್ವಾಮಿ ವಿವೇಕಾನಂದ ಶಾಲೆ, ಮರ್ಲಾನಹಳ್ಳಿ-ವೆಂಕಟೇಶ್ವರ ದೇವಸ್ಥಾನ ಆವರಣ, ಕಾರಟಗಿ- ಶ್ರೀಶರಣಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ, ಕಾರಟಗಿ- ಶ್ರೀಶಾರದಾ ಇಂಟರ್‌ನ್ಯಾಷನಲ್ ಶಾಲೆ, ನಾಗನಕಲ್- ಸರ್ಕಾರಿ ಪಾಲಿಟೆಕ್ನಿಕ್, ಕಾರಟಗಿ-ಸೆಂಟ್ರಲ್ ಪಬ್ಲಿಕ್ ಸ್ಕೂಲ್.
ಊಟದ ಸ್ಥಳ:ಮರ್ಲಾನಹಳ್ಳಿಯ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಎಲ್ಲ ಸ್ಪರ್ಧಾಳು, ಪಾಲಕರಿಗೆ ಮತ್ತು ಶಿಕ್ಷಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.ಪ್ರತಿಯೊಂದು ವೇದಿಕೆಗಳಿಂದ ಊಟದ ಸ್ಥಳಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಇಲ್ಲಿನ ಬಸ್ ನಿಲ್ದಾಣದಲ್ಲಿ ಮಾಹಿತಿ ಕೇಂದ್ರ ಸಹ ತೆರೆಯಲಾಗಿದೆ. ಭತ್ತದ ನಾಡು ಅನ್ನ ದಾಸೋಹಕ್ಕೆ ಹೆಸರು ವಾಸಿ. ಇಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿವೆ. ಇದೇ ರೀತಿ ಶಿಕ್ಷಣ ಇಲಾಖೆಯ ಈ ರಾಜ್ಯಮಟ್ಟದ ಕಾರ್ಯಕ್ರಮ ಸಹ ಇಲ್ಲಿ ನಡೆಸಲಾಗುತ್ತಿದೆ ಎಂದು ಡಿಡಿಪಿಐ ಹೇಳಿದರು.ಒಟ್ಟಿನಲ್ಲಿ ಎರಡು ದಿನಗಳ ಕಾಲ ಭತ್ತದ ಕಣಿಜದಲ್ಲಿ ನಾಡಿನ ವಿವಿಧಡೆಯ ಪ್ರೌಢಶಾಲೆ ಮಕ್ಕಳ ಕಲರವ ಕೇಳಿ ಬರಲಿದ್ದು, ಅದಕ್ಕಾಗಿ ಕಾರಟಗಿ ಸಂಪೂರ್ಣ ಸಜ್ಜಾಗಿ ನಿಂತಿದೆ.
ಉತ್ಸವದ ಲಾಂಛನ: ಕೊಪ್ಪಳ ಜಿಲ್ಲೆಯ ಹಿರಿಮೆ ಸಾರುವ ಎಲ್ಲ ಐತಿಹಾಸಿಕ ಸ್ಥಳಗಳನ್ನು ಲೋಗದಲ್ಲಿ ಬಳಕೆ ಮಾಡಲಿದೆ. ನಾಡಿನ ಎಲ್ಲ ಮಕ್ಕಳಿಗೆ ಕೊಪ್ಪಳ ಜಿಲ್ಲೆಯ ಐತಿಹ್ಯ ತಿಳಿಯಲು, ಅವುಗಳನ್ನು ನೋಡಿಕೊಂಡು ಕಣ್ಮುತುಂಬಿ ಕೊಳ್ಳಲಿ ಎನ್ನುವ ಉದ್ದೇಶದಿಂದ ನಮ್ಮ ಜಿಲ್ಲೆಯ ಗವಿಮಠ, ಆನೆಗೊಂದಿ, ಅಂಜನಾದ್ರಿ ಬೆಟ್ಟ, ಕುಕನೂರು, ಗಂಡುಗಲಿ ಕುಮಾರರಾಮನ ಬೆಟ್ಟ, ಇಟಗಿ ದೇವಾಲಯಗಳನ್ನು ಲೋಗೋದಲ್ಲಿ ಸೇರಿಸಲಾಗಿದೆ.