ಪೋಷಕರಲ್ಲಿ ಮಕ್ಕಳ ಶಿಕ್ಷಣ, ಕಾಳಜಿ ಮಾಹಿತಿ ಮುಖ್ಯ

| Published : Nov 11 2024, 12:57 AM IST

ಸಾರಾಂಶ

ಪ್ರಾಥಮಿಕ ಹಂತದಲ್ಲಿ ಶಾಲೆಗೆ ದಾಖಲಾಗುವ ಮಕ್ಕಳಿಗೆ ಪೂರ್ವಸಿದ್ಧತೆ ಎಂಬ ಅರಿವು ಇರುವುದಿಲ್ಲ. ಅಂತಹ ಮಕ್ಕಳಿಗೆ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರುವುದು ಬೋಧಕರಿಗೆ ಸವಾಲಿನ ಕೆಲಸವಾಗಿದೆ ಎಂದು ಶಿಕ್ಷಣ ಇಲಾಖೆ ಸಂಪನ್ಮೂಲ ಶಿಕ್ಷಕ ಎಂ.ಮಲ್ಲಿಕಾರ್ಜುನ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಶಿಕ್ಷಕ ಎಂ.ಮಲ್ಲಿಕಾರ್ಜುನ ಅಭಿಮತ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪ್ರಾಥಮಿಕ ಹಂತದಲ್ಲಿ ಶಾಲೆಗೆ ದಾಖಲಾಗುವ ಮಕ್ಕಳಿಗೆ ಪೂರ್ವಸಿದ್ಧತೆ ಎಂಬ ಅರಿವು ಇರುವುದಿಲ್ಲ. ಅಂತಹ ಮಕ್ಕಳಿಗೆ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರುವುದು ಬೋಧಕರಿಗೆ ಸವಾಲಿನ ಕೆಲಸವಾಗಿದೆ ಎಂದು ಶಿಕ್ಷಣ ಇಲಾಖೆ ಸಂಪನ್ಮೂಲ ಶಿಕ್ಷಕ ಎಂ.ಮಲ್ಲಿಕಾರ್ಜುನ ಹೇಳಿದರು.

ನ್ಯಾಮತಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರತಿ ತಿಂಗಳ ಎರಡನೇ ಶನಿವಾರ ನಡೆಯುವ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿವಿಧ ಮಾತೃಭಾಷೆ ಮಾತನಾಡುವ ಮಕ್ಕಳು ಶಾಲೆಗಳಿಗೆ ದಾಖಲಾಗುತ್ತವೆ. ಅಂತಹ ಮಕ್ಕಳನ್ನು ವಿದ್ಯಾ ಪ್ರವೇಶ ಮೂಲಕ, ಮಹಾನ್ ವ್ಯಕ್ತಿಗಳ ಪರಿಚಯ, ಸ್ಥಳೀಯವಾಗಿ ಪರಿಸರದ ಮೂಲ ಕಲ್ಪನೆಯ ಪರಿಚಯ ಮಾಡಿಸುವ ಮೂಲಕ ಮಕ್ಕಳಿಗೆ ಅನುಭವ ಕಲಿಸಬೇಕು. ಪ್ರಸ್ತುತ ದಿನಗಳಲ್ಲಿ ಮಕ್ಕಳ ಶಿಕ್ಷಣ ಮತ್ತು ಮಗುವಿನ ಕಾಳಜಿ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕಿದೆ ಎಂದರು.

ಹಿರಿಯ ಕವಿ ಸಂಡೂರು ಮಹೇಶ್ವರಪ್ಪ ಮಾತನಾಡಿ, ಪಟ್ಟಣದಲ್ಲಿರುವ ಮನೆತನಗಳ ಹೆಸರುಗಳು ಹೇಗೆ ಬಂದವು, ಹಿಂದಿನ ಮತ್ತು ಇಂದಿನ ಶಿಕ್ಷಣ ಪದ್ಧತಿ, ಸಮಾಜದಲ್ಲಿ ಪ್ರತಿಯೊಬ್ಬ ಸಮುದಾಯದವರು ಪ್ರೀತಿ- ವಿಶ್ವಾಸಗಳಿಂದ ಹೇಗೆ ಇದ್ದರೂ ಎಂಬ ಬಗ್ಗೆ ತಿಳಿಸಿದರು.

ತಾಲೂಕು ಕದಳಿ ಮಹಿಳಾ ಸಂಘದ ಅಧ್ಯಕ್ಷೆ ಅಂಬುಜಾ ಬಿದರಗಡ್ಡೆ ಮಾತನಾಡಿ, ಹಿಂದಿನ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಕಟ್ಟುನಿಟ್ಟಿನ ಆಚರಣೆಗಳಿದ್ದರೂ ಕುಟುಂಬದ ಸದಸ್ಯರು ಅನ್ಯೂನತೆಯಿಂದ ಇರುತ್ತಿದ್ದರು. ಇಂದಿನ ಪೋಷಕರು ತಮ್ಮ ಮಕ್ಕಳ ಉಡಿಗೆ ತೊಡಿಗೆ, ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕು, ಕುಟುಂಬಕ್ಕೆಎರಡು ಮಕ್ಕಳಾದರೂ ಇರಬೇಕು ಎಂದರು.

ತಾಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿ ಎಸ್.ಜಿ. ಬಸವರಾಜಪ್ಪ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಜಗದೀಶ, ಕುಂಕುವ ಗ್ರಾಪಂ ಅಧ್ಯಕ್ಷ ಚಂದನ್‍ ಜಂಗ್ಲಿ, ಬೆಳಗುತ್ತಿ ಹೋಬಳಿ ಘಟಕದ ಅಧ್ಯಕ್ಷ ಎಂ.ಜಿ. ಕವಿರಾಜ, ನಿವೃತ್ತ ಶಿಕ್ಷಕ ಮಂಜಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಕೆ. ಭೋಜರಾಜ, ಪ್ರಗತಿಪರ ರೈತರಾದ ನಾಗರಾಜಪ್ಪ, ಷಡಾಕ್ಷರಪ್ಪ, ವರ್ತಕ ಎನ್.ಟಿ. ಸತ್ಯನಾರಾಯಣ, ಯುವಕವಿ ಮಂಜುನಾಥ ಇದ್ದರು.

- - - -10ಎಚ್.ಎಲ್.ಐ1:

ಕನ್ನಡ ಸಾಹಿತ್ಯ ಪರಿಷತ್ತು ನ್ಯಾಮತಿ ತಾಲೂಕು ಘಟಕದಿಂದ ಶನಿವಾರ 8ನೇ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮ ನಡೆಯಿತು.