ಸಾರಾಂಶ
ಹಿರಿಯರಾದ ನಾವು ಮಕ್ಕಳ ಮನಸ್ಸಿನ ಭಾವನೆ ಅರ್ಥ ಮಾಡಿಕೊಳ್ಳಬೇಕು ಎಂದು ಸೀನಿಯರ್ ಚೇಂಬರ್ ಅಧ್ಯಕ್ಷ ನಾಗರಾಜ ಪುರಾಣಿಕ್ ತಿಳಿಸಿದರು.
ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಹಿರಿಯರಾದ ನಾವು ಮಕ್ಕಳ ಮನಸ್ಸಿನ ಭಾವನೆ ಅರ್ಥ ಮಾಡಿಕೊಳ್ಳಬೇಕು ಎಂದು ಸೀನಿಯರ್ ಚೇಂಬರ್ ಅಧ್ಯಕ್ಷ ನಾಗರಾಜ ಪುರಾಣಿಕ್ ತಿಳಿಸಿದರು.
ಮಂಗಳವಾರ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯಲ್ಲಿ ತಾಲೂಕು ಹಿರಿಯ ನಾಗರಿಕ ಸಮಿತಿ ಹಾಗೂ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಸಂಸ್ಥೆ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಿಕ್ಕವರಾಗಿದ್ದಾಗಲೇ ಮಕ್ಕಳಿಗೆ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು. ಮಕ್ಕಳು ದೇವರಿಗೆ ಸಮಾನ ಎಂದರು.ತಾಲೂಕು ಹಿರಿಯ ನಾಗರಿಕ ಸಮಿತಿ ಉಪಾಧ್ಯಕ್ಷ ಪಿ.ಕೆ.ಬಸವರಾಜ್ ಮಾತನಾಡಿ, ಮಕ್ಕಳಿಗೆ ಯಾವ ವಿಷಯವಾಗಿ ಆಸಕ್ತಿ ಇದೆಯೋ ಅದನ್ನು ಗುರುತಿಸಿ ಪೋಷಕರು ಪ್ರೋತ್ಸಾಹ ನೀಡಬೇಕು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸಲು ಶಿಕ್ಷಕರು ಪ್ರಯತ್ನಿಸಬೇಕು. ಏಕಾಗ್ರತೆಯಿಂದ ಅಭ್ಯಾಸ ಮಾಡಿ ಗುರಿ ಮುಟ್ಟಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.
ತಾಲೂಕು ಹಿರಿಯ ನಾಗರಿಕ ಸಮಿತಿ ಕಾರ್ಯದರ್ಶಿ ಪಿ.ಎಸ್.ವಿದ್ಯಾನಂದ ಕುಮಾರ್ ಮಾತನಾಡಿ, ನೆಹರೂ ಆಶಯದಂತೆ ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.ಅತಿಥಿಗಳಾಗಿ ಜ್ಞಾನ ಗಂಗೋತ್ರಿ ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ಎ.ಶ್ರೀಕಾಂತ್ , ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಸಂಸ್ಥೆ ಸದಸ್ಯರಾದ ಪಿ.ಪ್ರಭಾಕರ್, ಕೆ.ಎಸ್.ರಾಜಕುಮಾರ್ ,ಎಂ.ಕೆ.ಚಕ್ರಪಾಣಿ ,ಕುಮಾರ್ ಜಿ.ಶೆಟ್ಟಿ, ವಿ.ಡಿ.ಲಿಸ್ಸಿ , ಡಿ.ರಮೇಶ್, ಕೆ.ಎಸ್.ಜಗದೀಶ್, ಕೆ.ಎಂ.ಸುಂದರೇಶ್, ಕಟ್ಟಿನಮನೆ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಚ್.ಎಂ.ಮಂಜುನಾಥ ಗೌಡ ಉಪಸ್ಥಿತರಿದ್ದರು.
ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಆಶುಭಾಷಣ, ನಾಡಗೀತೆ ,ಗೋಣಿ ಚೀಲದ ಓಟ ,ಪೋಟ್ಯಾಟೊ ರೇಸ್ ಮುಂತಾದ ಸ್ಪರ್ಧೆ ಗಳನ್ನು ನಡೆಸಿ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು. ಬಹುಮಾನ ದಾನಿಗಳಾದ ನಿವೃತ್ತ ಎಎಸ್ ಐ ಕುಸುಬೂರು ಕೃಷ್ಣಮೂರ್ತಿ ವಿಜೇತ ಮಕ್ಕಳಿಗೆ ಬಹುಮಾನ ನೀಡಿದರು.