ತುಮಕೂರು: ಮಕ್ಕಳಲ್ಲಿ ಆಹಾರದ ಮಹತ್ವ ತಿಳಿಸಲು, ಬಳಕೆಯಲ್ಲಿರುವ ವಿಭಿನ್ನ ಸಂಸ್ಕೃತಿಯ ಆಹಾರ ಪರಿಚಯಿಸಿ ಅಭಿರುಚಿ ಬೆಳೆಸಲು, ಆಹಾರ ತಯಾರಿಕೆಯಲ್ಲಿ ಆಸಕ್ತಿ ರೂಢಿಸಲು ನಗರದ ಶಿರಾಗೇಟ್‌ನ ಹಿಂದೂಸ್ಥಾನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಮಕ್ಕಳ ಆಹಾರ ಮೇಳ ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಮಕ್ಕಳು ತಾವೇ ತಯಾರಿಸಿದ ವಿವಿಧ ರುಚಿಯ ಚಾಟ್ಸ್, ಸ್ನ್ಯಾಕ್ಸ್ ಮತ್ತಿತರ ಆರೋಗ್ಯಕರ ತಿಂಡಿಗಳನ್ನು ಮೇಳದಲ್ಲಿ ಆಕರ್ಷಕವಾಗಿ ಪ್ರದರ್ಶಿಸಿ, ಮಾರಾಟ ಮಾಡಿ ಗಮನ ಸೆಳೆದರು. ತಮ್ಮ ಮಕ್ಕಳು ಸಿದ್ಧಪಡಿಸಿದ ಆಹಾರವನ್ನು ಮುಗಿಬಿದ್ದು ಖರೀದಿಸಿದ ಪೋಷಕರು, ಸವಿದು ಸಂಭ್ರಮಿಸಿದರು.ಈ ವೇಳೆ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಜಮಾನಿ ಚಾನ್ ಸುಲ್ತಾನಾ, ನಮ್ಮಲ್ಲಿನ ಆಹಾರ ಪದ್ಧತಿ, ಅಭಿರುಚಿ ವಿಭಿನ್ನವಾಗಿದೆ. ಇಂತಹ ಆಹಾರ ಸಂಸ್ಕೃತಿಯ ವಿಭಿನ್ನತೆಯಲ್ಲಿ ಏಕತೆ ಎನ್ನುವಂತೆ ಮಕ್ಕಳು ತಮ್ಮ ಅಭಿರುಚಿಯ ಆಹಾರವನ್ನು ಇತರರಿಗೂ ಪರಿಚಯಿಸಲು, ಮಕ್ಕಳಲ್ಲಿ ಆಹಾರ ತಯಾರಿಕೆ ಬಗ್ಗೆ ಆಸಕ್ತಿ ಮೂಡಿಸಲು ಈ ಮೇಳ ಸಹಕಾರಿಯಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಬೆಳೆಸಿದರೆ ಅವರಲ್ಲಿ ಕ್ರಿಯಾಶೀಲತೆ, ಆಲೋಚನಾ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದರು.
ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಅಮೀನ್ ಖಾನ್ ಅವರು, ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ತಾವು ತಯಾರಿಸಿರುವ ಆಹಾರ ಪದಾರ್ಥಕ್ಕೆ ಬೆಲೆ ನಿಗದಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅವರ ವ್ಯವಹಾರ ಕೌಶಲ್ಯ ಬೆಳೆಯುತ್ತದೆ ಎಂದರು.ಶಾಲೆಯ ಆಡಳಿತ ಮಂಡಳಿ ಮುಖಂಡರಾದ ಅಶ್ಫಕ್ ಎ ಅಲಂ, ಯಾಸ್ಮೀನ್ ಸುಲ್ತಾನಾ, ಸಮಾಜ ಸೇವಕಿ ತಾಹೇರಾ ಕುಲ್ಸಂ ಹಾಗೂ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.