ಮಕ್ಕಳ ಆರೋಗ್ಯ ನಮ್ಮೆಲ್ಲರ ಮುಖ್ಯ ಜವಾಬ್ದಾರಿ: ಪ್ರೊ.ಚಂದ್ರಶೇಖರ್

| Published : Jun 17 2024, 01:36 AM IST

ಮಕ್ಕಳ ಆರೋಗ್ಯ ನಮ್ಮೆಲ್ಲರ ಮುಖ್ಯ ಜವಾಬ್ದಾರಿ: ಪ್ರೊ.ಚಂದ್ರಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಸಾಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಸಂಸ್ಥೆ ವತಿಯಿಂದ ಜೀವ ಜಲ ಕುಡಿಯುವ ನೀರು ಯೋಜನೆಯಡಿ ಮುತ್ತೂಟ್ ಫೈನಾನ್ಸ್ ಪ್ರಾಯೋಜಕತ್ವದಲ್ಲಿ ನೀಡಲಾದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ.

ಕನ್ನಡಪ್ರಭ ವಾರ್ತೆ ಸಾಗರಮಕ್ಕಳ ಆರೋಗ್ಯ ಕಾಪಾಡುವ ಜವಾಬ್ದಾರಿ ಸಮಾಜದ ಎಲ್ಲರಿಗೂ ಸೇರಿದೆ ಎಂದು ಜಲ ಜೀವನ್ ಯೋಜನೆ ರಾಜ್ಯ ಸಂಯೋಜಕ ಪ್ರೊ. ಚಂದ್ರಶೇಖರ್ ಎ.ಎಸ್. ಹೇಳಿದರು.

ಪಟ್ಟಣದ ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಸಂಸ್ಥೆ ವತಿಯಿಂದ ಜೀವ ಜಲ ಕುಡಿಯುವ ನೀರು ಯೋಜನೆಯಡಿ ಮುತ್ತೂಟ್ ಫೈನಾನ್ಸ್ ಪ್ರಾಯೋಜಕತ್ವದಲ್ಲಿ ನೀಡಲಾದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿ, ಇಂದಿನ ಮಕ್ಕಳು ಭವಿಷ್ಯದ ಪ್ರಜೆಗಳಾಗಿದ್ದು, ಅವರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಮನುಷ್ಯನಿಗೆ ಕುಡಿಯುವ ನೀರು ಮೂಲಭೂತ ಅಗತ್ಯಗಳಲ್ಲಿ ಒಂದಾಗಿದ್ದು, ಪರಿಶುದ್ಧ ಕುಡಿಯುವ ನೀರಿನ ಬಳಕೆಯಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳ ಬಹುದು. ಮುತ್ತೂಟ್ ಫೈನಾನ್ಸ್ ಕರ್ನಾಟಕದಲ್ಲಿ ರೋಟರಿ ಸಂಸ್ಥೆ ಜೊತೆಗೆ ಈಗಾಗಲೇ ೨೦ ಶಾಲೆಗೆ ಆರ್ಥಿಕ ನೆರವನ್ನು ನೀಡುತ್ತಿದ್ದು, ರೋಟರಿ ಸಂಸ್ಥೆ ಇದರ ನಿರ್ವಹಣೆ ಮಾಡುತ್ತಿದೆ. ರಾಜ್ಯದಲ್ಲಿ ಒಟ್ಟೂ ೪೨೫ ಶಾಲೆಗಳಿಗೆ ಇಂಥ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಲು ಯೋಜನೆ ರೂಪಿಸಲಾಗಿದ್ದು, ಹಂತ ಹಂತವಾಗಿ ಇದು ಜಾರಿಗೊಳ್ಳುತ್ತದೆ ಎಂದು ಹೇಳಿದರು.

ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ರವಿ ಕೋಟೋಜಿ ಮಾತನಾಡಿ, ರೋಟರಿ ಸಂಸ್ಥೆ ಒಂದು ಅಂತರಾಷ್ಟ್ರೀಯ ಸೇವಾ ಸಂಸ್ಥೆ. ಪೊಲಿಯೋ ನಿರ್ಮೂಲನಕ್ಕೆ ಇದರ ದೊಡ್ಡ ಕೊಡುಗೆ ಇದೆ. ಪೊಲಿಯೋ ಲಸಿಕೆಗೆ ರೋಟರಿ ಸಂಸ್ಥೆ ಆರಂಭದಿಂದ ಇಂದಿನವರೆಗೂ ಹಣಕಾಸು ನೆರವು ನೀಡುತ್ತ ಬಂದಿದೆ. ಭಾರತದಲ್ಲಿ ಪೊಲಿಯೋ ನಿರ್ಮೂಲನೆಯಾದರೂ ಅಪಘಾನಿಸ್ತಾನ ಇತರೆ ದೇಶಗಳಲ್ಲಿ ಇದು ನಿರ್ಮೂಲನೆಯಾಗಿಲ್ಲ. ೧೧೯ ವರ್ಷಗಳಿಂದ ರೋಟರಿ ಸಂಸ್ಥೆ ತನ್ನ ಉದ್ದೇಶಿತ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಇಲ್ಲಿ ಈಗಾಗಲೇ ರೋಟರಿ ರಕ್ತನಿಧಿ ಮೂಲಕ ಜನರಿಗೆ ತನ್ನ ಸೇವೆ ಸಲ್ಲಿಸುತ್ತಿದೆ ಎಂದರು.

ರೋಟರಿ ಸಂಸ್ಥೆ ಅಧ್ಯಕ್ಷೆ ಡಾ.ರಾಜನಂದಿನಿ ಕಾಗೋಡು ಮಾತನಾಡಿ, ಕೆಲವು ತಿಂಗಳ ಹಿಂದೆ ಈ ಶಾಲೆಗೆ ಪರಿಸರ ಸಂಬಂಧಿ ಕಾರ್ಯಕ್ರಮವೊಂದಕ್ಕೆ ಬಂದಾಗ, ಕುಡಿಯುವ ನೀರಿನ ಕೊರತೆ ಕುರಿತು ಶಾಲಾಭಿವೃದ್ಧಿ ಸಮಿತಿಯವರು ವಿನಂತಿಸಿಕೊಂಡಿದ್ದರು. ೧೨೩ ವರ್ಷಗಳ ಇತಿಹಾಸವಿರುವ ಈ ಶಾಲೆಯ ಕಾರ್ಯ ಚಟುವಟಿಕೆ ನೋಡಿ ಈ ಘಟಕವನ್ನು ಇಲ್ಲಿಗೆ ನೀಡಲಾಯಿತು ಎಂದು ಹೇಳಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುತ್ತೂಟ್ ಫೈನಾನ್ಸ್ ಸಾಗರ ಶಾಖೆ ಮ್ಯಾನೇಜರ್ ಆದಿತ್ಯ ಜಿ., ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್, ರೋಟರಿ ಸಂಸ್ಥೆಯ ಪ್ರಮುಖರಾದ ಎಂ.ಕೆ.ಶಾಂತಕುಮಾರ್, ಕೆ.ಗುರುಪ್ರಸಾದ್, ಅಶ್ವತ್ಥ ನಾರಾಯಣ, ಪ್ರಕಾಶ್ ಎನ್., ವೆಂಕಟರಾವ್, ಧರ್ಮೇಂದ್ರ ಸಿಂಗ್, ರವೀಶ್ ಮತ್ತಿತರರಿದ್ದರು.