ಸಾರಾಂಶ
ವ್ಯಾಲಿ ಕಿಡ್ಸ್‌ನ ಶಾಲಾ ವಾರ್ಷಿಕೋತ್ಸವ । ಸಾಂಸ್ಕೃತಿಕ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಮಕ್ಕಳ ಮುಗ್ಧ ಮನಸ್ಸು ಹಸಿ ಮಣ್ಣಿನ ಮುದ್ದೆಯಂತೆ, ವಾಲಿದ ಕಡೆ ಬಾಗುವುದು ಸಹಜ, ಶಿಕ್ಷಕರು ಮಕ್ಕಳ ಮನಸ್ಸನ್ನು ಸ್ಥಿರವಾಗಿ ಗಟ್ಟಿಗೊಳಿಸಿ ದೇಶದ ಸತ್ಪ್ರಜೆಗಳಾಗಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೆಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ವ್ಯಾಲಿ ಕಿಡ್ಸ್‌ನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು, ಮಾತನಾಡಿ ಮಕ್ಕಳನ್ನು ಸಂಸ್ಕಾರವಂತ, ಶಿಕ್ಷಣವಂತ, ರಾಷ್ಟ್ರಪೇಮಿಗಳಾಗಿ ರೂಪುಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆ ನಿಟ್ಟಿನಲ್ಲಿ ವ್ಯಾಲಿ ಕಿಡ್ಸ್ ಶಾಲೆ ಲಾಭದ ಆಸೆಗೆ ಒಳಗಾಗದೇ, ಮಕ್ಕಳಲ್ಲಿ ರಾಷ್ಟ್ರಭಕ್ತಿ, ಮೌಲ್ಯಯುತ ಶಿಕ್ಷಣ ಹಾಗೂ ಸಂಸ್ಕಾರವನ್ನು ಬೋಧಿಸುತ್ತಿದೆ ಎಂದರು.ಇತ್ತೀಚಿಗೆ ದಿನದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಚಟ, ಅಧಿಕ ಅಂಕ ಗಳಿಸದ ಕಾರಣ ಆತ್ಮಹತ್ಯೆಗೆ ತುತ್ತಾ ಗುತ್ತಿವೆ. ಇದಕ್ಕೆ ಮೌಲ್ಯಧಾರಿತ ಶಿಕ್ಷಣದ ಕೊರತೆಯೇ ಕಾರಣ. ಪಾಲಕರು ಕೇವಲ ಅಂಕ ಗಳಿಕೆಗೆ ಮಾತ್ರ ಮಕ್ಕಳನ್ನು ಸೀಮಿತಗೊಳಿಸದೇ ವ್ಯವಹಾರಿಕ ಜ್ಞಾನದ ಪರಿಪಾಠವನ್ನು ಬೋಧಿಸುವತ್ತ ಗಮನಹರಿಸಬೇಕು ಎಂದರು.
ನಗರಸಭೆ ಸದಸ್ಯ ಕವಿತಾ ಶೇಖರ್ ಮಾತನಾಡಿ, ಮಕ್ಕಳ ಜೀವನ ಖಾಲಿ ಚೀಲದಂತೆ, ಆಸಕ್ತಿ ಹೊಂದಿರುವ ವಿಷಯದಲ್ಲಿ ಶಿಕ್ಷಕರು ಜ್ಞಾನವನ್ನು ತುಂಬಿಸಬೇಕು. ಭವಿಷ್ಯದಲ್ಲಿ ಸಚಿನ್ ತೆಂಡೂಲ್ಕರ್, ಲತಾ ಮಂಗೇಶ್ವರ್, ಪಿಟಿ ಉಷಾ ಅಥವಾ ದೇಶದ ಹೆಮ್ಮೆಯ ಮಾಜಿ ರಾಷ್ಟ್ರಪತಿ ಕಲಾಂ ಮಾದರಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದರು.ಡಾ.ಉಮೇಶ್ ರಾವ್ ಮಾತನಾಡಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮೊದಲು ಪಾಲಕರು ಟಿವಿ ಧಾರವಾಹಿಗಳನ್ನು ಬದಿಗಿರಿಸಿ, ವಿದ್ಯಾರ್ಜನೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅಲ್ಲದೇ ದೇವಾಲಯ ಕಳಿಸುವ ಜೊತೆಗೆ ಇತಿಹಾಸ ಧರ್ಮಗ್ರಂಥದ ಸಾರವನ್ನು ಪರಿಚಯಿಸಿದರೆ ನಾಡಿನ ಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ವೇದಿಕೆ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ವ್ಯಾಲಿ ಕಿಡ್ಸ್ ಶಾಲೆಯ ಪೌಂಡರ್ ಮಂಜುಳಾ ಗಂಗಾಧರ್, ವಿದ್ಯಾರ್ಥಿಗಳು, ಪಾಲಕರು ಇದ್ದರು.