ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಎಲೆ ಮರೆ ಕಾಯಿಯಂತಿರುವ ಮಕ್ಕಳ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಉತ್ತಮ ಕ್ರೀಡಾಪಟುವಾಗಲು ಸಾಧ್ಯ ಎಂದ ನಾಪೋಕ್ಲು ಕೊಡವ ಸಮಾಜದ ಗೌರವ ಕಾರ್ಯದರ್ಶಿ, ಹಿರಿಯ ಹಾಕಿ ಆಟಗಾರ ಕುಲ್ಲೇಟಿರ ಅಜಿತ್ ನಾಣಯ್ಯ ಹೇಳಿದರು.ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ನಾಲ್ನಾಡ್ ಹಾಕಿ ಕ್ಲಬ್ ಬಲ್ಲಮಾವಟಿ ವತಿಯಿಂದ ಸೋಮವಾರ ಆಯೋಜಿಸಲಾಗಿರುವ ಉಚಿತ ಹಾಕಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ಹಿಂದೆ ವಿದ್ಯಾರ್ಥಿಗಳಿಗೆ ಶಿಬಿರಗಳ ನೆರವು ಇರಲಿಲ್ಲ. ಶಾಲೆಗಳಲ್ಲಿ ಮಾತ್ರ ಕ್ರೀಡೆಯನ್ನು ಕಲಿಯಬೇಕಿತ್ತು. ಇದೀಗ ಹಲವು ಸಂಘ ಸಂಸ್ಥೆಗಳು ಮುಂದೆ ಬಂದಿದ್ದು, ಮಕ್ಕಳಿಗೆ ಉತ್ತಮ ತರಬೇತಿ ಸಿಗುತ್ತಿದೆ. ಇಲ್ಲಿ ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಪ್ರಯೋಜತ್ವದಲ್ಲಿ ಶಿಬಿರ ನಡೆಯುತ್ತಿದ್ದು, ಇದು ಪ್ರಸಂಶನೀಯ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದರು.ನಾಲ್ನಾಡು ಹಾಕಿ ಕ್ಲಬ್ ಕಾರ್ಯದರ್ಶಿ ಚಂಗೇಟಿರ ಕುಮಾರ್ ಸೋಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಬಲ್ಲಮಾವಟಿ, ದೊಡ್ಡಪುಲಿಕೋಟು, ನೆಲಜಿ ಮತ್ತು ಪೇರೂರು ಗ್ರಾಮಗಳ ಆಸಕ್ತ ಸಮಾನ-ಮನಸ್ಕರು ಹಾಕಿ ಕ್ಲಬ್ ಹುಟ್ಟುಹಾಕಿದ್ದು, ಹಲವು ವರ್ಷಗಳ ಕಾಲ ನಾಲ್ನಾಡ್ ಕಪ್ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ನಾಲ್ಕುನಾಡು ವ್ಯಾಪ್ತಿಯ ಹಾಕಿ ಪಂದ್ಯಾಟಕ್ಕೆ ಕಳೆದ ವರ್ಷ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಪುನಶ್ಚೇತನ ನೀಡಿದ್ದು, ಹಾಕಿ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಉತ್ಸವದೊಂದಿಗೆ ಆಸಕ್ತರಿಗೆ ತರಬೇತಿ ನೀಡುವ ಉದ್ದೇಶದಿಂದ ಉಚಿತ ತರಬೇತಿ ಶಿಬಿರವು 5-12 ಮತ್ತು 13-21 ವಯೋಮಿತಿಯವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿದೆ ಎಂದರು.ರಾಷ್ಟ್ರೀಯ ತೀರ್ಪುಗಾರ, ಹಿರಿಯ ಹಾಕಿ ಆಟಗಾರರಾದ ಕಾಟುಮಣಿಯಂಡ ಉಮೇಶ್ ಮತ್ತು ಗಣ್ಯರು ಹಾಕಿ ಸ್ಟಿಕ್‌ನಿಂದ ಚೆಂಡು ಹೊಡೆಯುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ನುರಿತ ತರಬೇತುದಾರರಿಂದ ಶಿಬಿರಾರ್ಥಿಗಳಿಗೆ ತರಬೇತಿ ನಡೆಯಿತು.ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕ್ಲಬ್ ಉಪಾಧ್ಯಕ್ಷ ಕೈಬುಲಿರ ಉಮೇಶ್ ಉತ್ತಪ್ಪ, ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಖಜಾಂಚಿ ಚೀಯಂಡಿರ ದಿನೇಶ್ ಗಣಪತಿ, ಸಹಕಾರ್ಯದರ್ಶಿ ಮಚ್ಚುರ ಯದುಕುಮಾರ್, ತರಬೇತುದಾರರಾದ ಅಂಜಪರವಂಡ ರೋಷನ್ ಮಾದಪ್ಪ, ಅಲ್ಲಾರಂಡ ಅಪ್ಪಣ್ಣ, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಕರವಂಡ ಅಪ್ಪಣ್ಣ ಮತ್ತು ಪೋಷಕರು ಗ್ರಾಮಸ್ಥರು ಉಪಸ್ಥಿತರಿದ್ದರು.