ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ಮಕ್ಕಳಲ್ಲಿರುವ ಕಲಾತ್ಮಕ ಸುಪ್ತ ಪ್ರತಿಭೆಗಳ ಮೇಲೆ ಬೆಳಕು ಚೆಲ್ಲಲು ಮಕ್ಕಳ ಸಾಹಿತ್ಯ ಸಂಭ್ರಮ ಶಿಬಿರ ಉತ್ತಮ ವೇದಿಕೆಯಾಗಲಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ ತಿಳಿಸಿದರು.
ತಾಲೂಕಿನ ಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಮಂಗಲ ಗ್ರಾಮ ಪಂಚಾಯಿತಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕದ ತಾಲೂಕು ಘಟಕ ಹಾಗೂ ಮೊಬಿಲಿಟಿ ಇಂಡಿಯಾ ಸಂಯುಕ್ತಾಶ್ರಯದಲ್ಲಿಂದು ಆಯೋಜಿಸಲಾಗಿದ್ದ ಚಾಮರಾಜನಗರ ತಾಲೂಕು ಮಟ್ಟದ ೩ ದಿನಗಳ ವಸತಿರಹಿತ ’ಮಕ್ಕಳ ಸಾಹಿತ್ಯ ಸಂಭ್ರಮ’ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಮಕ್ಕಳಿಗೆ ಶಾಲೆಗಳಲ್ಲಿ ದೈನಂದಿನ ಪಾಠ, ಪ್ರವಚನದ ಜೊತೆಗೆ ಕಥೆ ಕಟ್ಟುವುದು, ಕವಿತೆ ರಚನೆ, ನಾಟಕಗಳಲ್ಲಿ ಅಭಿನಯ, ಪ್ರಬಂಧ, ಚರ್ಚೆ, ವಾಚನ ಮಾಡುವುದು, ಬರಹ, ಅನುಭವ, ಕನಸು-ಕಲ್ಪನೆಗಳನ್ನು ವ್ಯಕ್ತಪಡಿಸುವುದು, ಸಾಹಿತ್ಯಾತ್ಮಕ ಚಟುವಟಿಕೆಗಳು ಸೇರಿದಂತೆ ಹಲವಾರು ಬಗೆಯ ಪ್ರತಿಭಾ ಕಲಾ ಪ್ರಾಕಾರಗಳನ್ನು ಹೊರಸೂಸಲು ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ಸೂಕ್ತ ವೇದಿಕೆ ಒದಗಿಸಲಿದೆ. ಮಕ್ಕಳ ಉನ್ನತ ಸಾಧನೆಗೆ ಶಿಬಿರವು ಪ್ರೇರಣೆಯಾಗಬೇಕು ಎಂದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯಾದ್ಯಂತ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದ್ದು, ಮಕ್ಕಳ ಸಬಲೀಕರಣಕ್ಕಾಗಿ ಉತ್ತಮ ಹೆಜ್ಜೆ ಇಟ್ಟಿದೆ. ಶಿಬಿರಗಳ ನಿರ್ವಹಣೆಗಾಗಿ ನಿಯೋಜಿಸಿರುವ ಸಂಪನ್ಮೂಲ ಶಿಕ್ಷಕರು ಮಕ್ಕಳ ಪ್ರತಿಭೆ ಅನಾವರಣಕ್ಕಾಗಿ ಪೂರಕವಾಗಿ ಸ್ಪಂದಿಸಬೇಕು. ಮಕ್ಕಳು ಸಹ ತಮಗೆ ದೊರೆತಿರುವ ಸದಾವಕಾಶವನ್ನು ಸದ್ಭಳಕೆ ಮಾಡಕೊಳ್ಳಬೇಕು. ತಂದೆ ತಾಯಿ, ಗುರು ಹಿರಿಯರನ್ನು ಗೌರವದಿಂದ ಕಾಣಬೇಕು. ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ತಿಳಿಸಿದರು. ಡಯಟ್ ಪ್ರಾಂಶುಪಾಲ ಕಾಶೀನಾಥ್ ಮಾತನಾಡಿ ಇಂದಿನ ಮಕ್ಕಳಲ್ಲಿ ಟಿ.ವಿ, ಮೊಬೈಲ್ ಬಳಕೆ ಅತಿಯಾಗಿದೆ. ನಿರಂತರ ಕಲಿಕೆಯ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಬೇಕು. ಮಕ್ಕಳು ತಮ್ಮ ಊರಿನ ಸ್ಥಳೀಯ ಸಾಂಸ್ಕೃತಿಕ ಇತಿಹಾಸವನ್ನು ಅರಿಯಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೆಗೌಡ ಮಾತನಾಡಿ ಮಕ್ಕಳು ಸಾಹಿತ್ಯಾತ್ಮಕ ಚಟುವಟಿಕೆಗಳ ಬಗ್ಗೆ ಹೆಚ್ಚು ಒಲವು ತೋರಬೇಕು. ಪುಸ್ತಕ ಓದುವ ಸಂಸ್ಕೃತಿಗೆ ಮಕ್ಕಳು ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಉತ್ತಮ ಸಾಹಿತಿಗಳಿದ್ದಾರೆ. ಅವರನ್ನು ಮಾದರಿಯಾಗಿಸಿಕೊಂಡು ಮುನ್ನಡೆಯಬೇಕು ಎಂದರು. ಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಸ್. ಅಣ್ಣಪ್ಪಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳು ಲಭ್ಯವಿರುವ ಸಾಹಿತ್ಯ ಗ್ರಂಥಗಳನ್ನು ಮನನ ಮಾಡಿ ಹೆಚ್ಚಿನ ಅನುಭವ ಪಡೆಯಬೇಕು. ಸಾಹಿತಿಗಳ ಹಾಗೂ ಉನ್ನತ ಸಾಧನೆ ಮಾಡಿರುವವರ ಜೀವನ ಚರಿತ್ರೆಗಳನ್ನು ಅರಿಯಬೇಕು ಎಂದು ತಿಳಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಬಾಬು ಮಕ್ಕಳ ಸಾಹಿತ್ಯ ಸಂಭ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಯ್ಯನ ಸರಗೂರು ಮಠದ ಮಹದೇವಸ್ವಾಮಿಜೀ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಮಂಗಲ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥಸ್ವಾಮಿ, ಎಂ. ಮಹೇಶ, ವೈ.ಸಿ. ಮಹದೇವಸ್ವಾಮಿ, ಮಂಜು, ಶಶಿಧರ, ಸುಧಾ, ಸುಮಾ, ಶ್ರುತಿ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೆ.ವಿ. ಉಮೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆದಿಶೇಷಮೂರ್ತಿ, ಕಾರ್ಯದರ್ಶಿ ನಾಗರಾಜು, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರವಿಕುಮಾರ್, ಬಿ.ಆರ್.ಸಿ ರಾಜೀವ್, ಎಸ್.ಡಿ.ಎಂ.ಸಿ ಅಧ್ಯಕ್ಷ ಶಾಂತಮ್ಮ, ಮೊಬಿಲಿಟಿ ಇಂಡಿಯಾದ ಜಿಲ್ಲಾ ಸಂಯೋಜಕ ರಾಜಣ್ಣ, ಗ್ರಾಮ ಪಂಚಾಯತ್ ಅಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.