ಸಾರಾಂಶ
ಅವಿಭಜಿತ ಕೋಲಾರ ಜಿಲ್ಲೆಯಲ್ಲಿನ ಕಠಿಣ ಹಾದಿಯಲ್ಲಿ ಸಿದ್ಧಾಂತ, ಬದ್ಧತೆಗೆ ನಿಷ್ಠವಾಗಿ ಕೋಲಾರ ಪತ್ರಿಕೆ ೫೦ ವರ್ಷಗಳಲ್ಲಿ ನಡೆದು ಬಂದ ಹಾದಿಯನ್ನು ವಿವರಿಸಿದರು.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಶಿಶು ಸಾಹಿತ್ಯವು ಮಕ್ಕಳಲ್ಲಿನ ಬುದ್ಧಿ ಸೂಕ್ಷ್ಮತೆ ಮತ್ತು ಸಮಯಪ್ರಜ್ಞೆಯನ್ನು ಹೆಚ್ಚಿಸುತ್ತದೆ ಎಂದು ಸಾಹಿತಿ ಮಾಸ್ತಿ ಕೃಷ್ಣಪ್ಪ ತಿಳಿಸಿದರು.ಕೋಲಾರ ಪತ್ರಿಕೆಯ ಸುವರ್ಣ ಸಂಭ್ರಮದ ಪ್ರಯುಕ್ತ ಪಟ್ಟಣದ ಅನಿಕೇತನ ಬಳಗದ ಸಹಯೋಗದೊಂದಿಗೆ ನವಚೇತನ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಪಂಚತಂತ್ರ ಹಾಗೂ ಇತರ ಮಕ್ಕಳ ಕಥೆಗಳು ಪರೋಪಕಾರ, ಮಿತ್ರತ್ವದಂತಹ ಮೌಲ್ಯಗಳನ್ನು ಹೆಚ್ಚಿಸಿ ಸದೃಢ ಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಹಪಠ್ಯ ಸಾಹಿತ್ಯವನ್ನು ಓದುವುದನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕೋಲಾರ ಪತ್ರಿಕೆಯ ಮಾಲೀಕರಾದ ಶ್ರೀವಾಣಿ ಪ್ರಹ್ಲಾದ ರಾವ್ ಅವರು ಪ್ರಾಸ್ತಾವಿಕ ಭಾಷಣದಲ್ಲಿ, ಅವಿಭಜಿತ ಕೋಲಾರ ಜಿಲ್ಲೆಯಲ್ಲಿನ ಕಠಿಣ ಹಾದಿಯಲ್ಲಿ ಸಿದ್ಧಾಂತ, ಬದ್ಧತೆಗೆ ನಿಷ್ಠವಾಗಿ ಕೋಲಾರ ಪತ್ರಿಕೆ ೫೦ ವರ್ಷಗಳಲ್ಲಿ ನಡೆದು ಬಂದ ಹಾದಿಯನ್ನು ವಿವರಿಸಿದರು. ಸ್ಥಾಪಕ ಸಂಪಾದಕ ಕೆ. ಪ್ರಹ್ಲಾದ ರಾವ್ ಅವರ ಸಾಹಸ, ಸಾಧನೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಕನ್ನಡ ಪಸರಿಕೆಯಲ್ಲಿ ಹಾಗೂ ಜಿಲ್ಲೆಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿರುವ ಕೋಲಾರ ಪತ್ರಿಕೆ, ಈ ೫೦ನೇ ವರ್ಷವಿಡೀ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕ ತೇಜೇಶ್ ಮಾತನಾಡಿ, ಕನ್ನಡ ಭಾಷೆಯ ಮೂಲಕ ತಮ್ಮತನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನವಚೇತನ ವಿದ್ಯಾಸಂಸ್ಥೆಯ ಅಧ್ಯಕ್ಷ ಎಲ್. ರಾಮಕೃಷ್ಣ, ಕೋಲಾರ ಪತ್ರಿಕೆ ಸಂಪಾದಕ ಸುಹಾಸ್ ರಾವ್, ಪ್ರಾಂಶುಪಾಲ ವೆಂಕಟಸುಬ್ಬಯ್ಯ, ಅನಿಕೇತನ ಬಳಗದ ಅಧ್ಯಕ್ಷ ರಾಮಪ್ರಸಾದ್, ಮೈ. ಸತೀಶ್ ಕುಮಾರ್ , ಮಂಜುನಾಥ್, ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಪಿ. ಚಂದ್ರಪ್ರಕಾಶ್, ಖ್ಯಾತ ಛಾಯಾಗ್ರಾಹಕ ಕೆ. ಎಸ್, ನಾಗರಾಜ್, ಆಪ್ತಸಲಹೆಗಾರ ಶಿಳ್ಳೆಂಗೆರೆ ಗಿರೀಶ್ ಬಾಬು, ವ್ಯವಸ್ಥಾಪಕ ಎಂ. ರಮೇಶ್, ಬಂಗಾರಪೇಟೆಯ ಹಿರಿಯ ವಕೀಲ ಜಯಪ್ರಕಾಶ್, ಕನ್ನಡ ಹೋರಾಟಗಾರರಾದ ಅ.ಕೃ. ಸೋಮಶೇಖರ್, ಜಗದೀಶ್ ಭಾಗವಹಿಸಿದ್ದರು.