ನಾಟಕದಲ್ಲಿ ಭಾಗವಹಿಸುವುದರಿಂದ ಮಕ್ಕಳ ಚಿಂತನಾ ಸಾಮರ್ಥ್ಯ ಹೆಚ್ಚುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರುಒಂದು ನಾಟಕ ಮಾಡಿದರೆ ಒಂದು ಪಠ್ಯ ಓದಿದಂತೆ. ಈ ಎಲ್ಲಾ ಕಾರಣಗಳಿಗಾಗಿ ಶಾಲೆಗಳಲ್ಲಿ ಮಕ್ಕಳು ನಾಟಕದಲ್ಲಿ ಅಭಿನಯಿಸಲು ವೇದಿಕೆ ಕಲ್ಪಿಸಬೇಕು ಎಂದು ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ಸಲಹೆ ನೀಡಿದರು.ನಗರದ ರಂಗಾಯಣವು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಕಲಾಮಂದಿರದಲ್ಲಿ ಆಯೋಜಿರುವ ಮಕ್ಕಳ ಬಹುರೂಪಿ ನಾಟಕೋತ್ಸವವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ನಾಟಕ ಸೇರಿದಂತೆ ಇನ್ನಿತರ ಕಲೆಗಳಲ್ಲಿ ತೊಡಗಿಸಿಕೊಳ್ಳಲು ಪೋಷಕರು ಪ್ರೋತ್ಸಾಹಿಸಬೇಕು ಎಂದರು.ನಾಟಕದಲ್ಲಿ ಭಾಗವಹಿಸುವುದರಿಂದ ಮಕ್ಕಳ ಚಿಂತನಾ ಸಾಮರ್ಥ್ಯ ಹೆಚ್ಚುತ್ತದೆ. ನಾಟಕದಲ್ಲಿ ಅಭಿನಯಿಸುವುದರಿಂದ ಧೈರ್ಯ, ಹಂಚಿಕೊಳ್ಳುವ ಮನೋಭಾವ, ಸ್ನೇಹ, ಬದುಕುವ ರೀತಿ. ಅನಿಸಿದ್ದನ್ನು ಹೇಳುವ ಗುಣಗಳು ಬರುತ್ತವೆ. ಹೀಗಾಗಿ, ಮಕ್ಕಳು ನಾಟಕಗಳಲ್ಲಿ ಅಭಿನಯಿಸಬೇಕು ಎಂದು ಅವರು ತಿಳಿಸಿದರು.ನಾಟಕವನ್ನು ಕಣ್ಣಿನಿಂದ ನೋಡದೇ ಮನಸ್ಸಿನಿಂದ, ಹೃದಯದಿಂದ ನೋಡಬೇಕು. ಆಗ ಅದರ ಪ್ರಬಾವ ನಮ್ಮ ಮೇಲಾಗುತ್ತದೆ. ಶಾಲೆಗಳಲ್ಲಿ ಅಂಬೇಡ್ಕರ್‌ ಕುರಿತು ನಾಟಕ ಪ್ರದರ್ಶನ ಆಯೋಜಿಸಿದರೆ ಮಕ್ಕಳಿಗೆ ಅವರ ಜೀವನ ವಿಧಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡಬಹುದಾಗಿದೆ. ಮಕ್ಕಳು ನಾಟಕ ನೋಡಿದ ನಂತರ ಅದರಲ್ಲಿ ಅಡಕವಾಗಿರುವ ವಿಚಾರಗಳ ಕುರಿತು ಚರ್ಚಿಸಬೇಕು. ಆಗ ಮನಸ್ಸು ವಿಕಾಸವಾಗುತ್ತದೆ. ಮನಸ್ಸು ಅರಳಬೇಕಾದರೆ ನಾಟಕ ನೋಡಬೇಕು ಎಂದು ಅವರು ಹೇಳಿದರು.ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಡಾ. ಜಾಹೀದಾ, ರಂಗಾಯಣ ನಿರ್ದೇಶಕ ಸತೀಶ್‌ ತಿಪಟೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್‌, ರಂಗಸಮಾಜದ ಸದಸ್ಯರಾದ ಮಹಾಂತೇಶ್‌ ಗಜೇಂದ್ರಗಡ, ಡಾ.ಕೆ. ರಾಮಕೃಷ್ಣಯ್ಯ ಮೊದಲಾದವರು ಇದ್ದರು. ಮಾಯಾದ್ವೀಪ ಪ್ರದರ್ಶನನಂತರ ವಿಲಿಯಂ ಶೇಕ್ಸ್‌ ಪಿಯರ್‌ ಅವರ "ದಿ ಟೆಂಪೆಸ್ಟ್‌ " ಕನ್ನಡದಲ್ಲಿ ''''''''ಮಾಯಾದ್ವೀಪ'''''''' ನಾಟಕ ಪ್ರದರ್ಶನಗೊಂಡಿತು. ಪುನಿತ್‌ ಕರ್ತ ನಿರ್ದೇಶನದಲ್ಲಿ ನೆನಪು ಕಲ್ಚರಲ್‌ ಮತ್ತು ಎಜುಕೇಷನಲ್‌ ಚಾರಿಟೆಬಲ್‌ ಟ್ರಸ್ಟ್ ತಂಡ ಪ್ರದರ್ಶಿಸಿದ ನಾಟಕವನ್ನು ಮಕ್ಕಳು ಮೆಚ್ಚಿಕೊಂಡರು.