- ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ 264 ಶಾಲೆಗಳಿವೆ

- 1ರಿಂದ ಎಸ್ಸೆಸ್ಸೆಲ್ಸಿವರೆಗೆ 13.775 ವಿದ್ಯಾರ್ಥಿಗಳಿದ್ದಾರೆ

- ವಾರದ 2 ದಿನ ಉಚಿತ ಮೊಟ್ಟೆ, ಬಾಳೆಹಣ್ಣು ವಿತರಣೆ

- ಶಿಕ್ಷಕರು ತಮ್ಮ ಕಿಸೆಯಿಂದ ಭರಿಸಬೇಕಾದ ಅನಿವಾರ್ಯಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಮಕ್ಕಳಲ್ಲಿನ ಪೌಷ್ಟಿಕಾಂಶ ಕೊರತೆ ನೀಗಿಸುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರ ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ಸರ್ಕಾರಿ ಮತ್ತು ಅನುದಾನಿತ ಕಿರಿಯ ಹಿರಿಯ ಪ್ರಾಥಮಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುವ ಮೊಟ್ಟೆ, ಬಾಳೆಹಣ್ಣಿನ ವಿತರಣೆಯಿಂದ ಶಿಕ್ಷಕರು ತಮ್ಮ ಕೈಯಿಂದ ಹಣ ಹಾಕುವ ಮೂಲಕ ಜೇಬಿಗೆ ಕತ್ತರಿ ಬಿದ್ದಿದೆ!


ಹೊಸನಗರ ತಾಲೂಕಿನ ವ್ಯಾಪ್ತಿಯಲ್ಲಿ 264 ಶಾಲೆಗಳು ಬರುತ್ತಿದ್ದು ಒಂದರಿಂದ ಎಸ್.ಎಸ್.ಎಲ್.ಸಿ.ವರೆಗೆ ಸರ್ಕಾರಿ ಮತ್ತು ಅನುದಾನಿತ ಖಾಸಗಿ ಕಿರಿಯ ಮತ್ತು ಹಿರಿಯ ಪ್ರೌಢಶಾಲೆಗಳಲ್ಲಿ 13.775 ವಿದ್ಯಾರ್ಥಿಗಳಿಗೆ ವಾರದ ಎರಡು ದಿನ ಸರ್ಕಾರದಿಂದ ಉಚಿತವಾಗಿ ಮೊಟ್ಟೆ ಮತ್ತು ಬಾಳೆಹಣ್ಣು ನೀಡುವ ಯೋಜನೆಗೆ ಶಿಕ್ಷಕ ವರ್ಗ ತಮ್ಮ ಕಿಸೆಯಿಂದ ಹಣ ಹಾಕುವಂತಾಗಿದೆ.

ಮೊಟ್ಟೆ ಒಂದಕ್ಕೆ ಸರ್ಕಾರ 6 ರು.ಗಳನ್ನು ನೀಡುತ್ತಿದೆ. ಆದರೆ, ಅಂಗಡಿಗಳಲ್ಲಿ ಮೊಟ್ಟೆಯ ಬೆಲೆ ಈಗ 8 ರಿಂದ 9 ರು. ಬೆಲೆ ಇದೆ. ಹೆಚ್ಚುವರಿ ವೆಚ್ಚವನ್ನು ಶಿಕ್ಷಕರೆ ಭರಿಸಿ, ಮೊಟ್ಟೆ ಖರೀದಿಸಿ ತಂದು ಮಕ್ಕಳಿಗೆ ನೀಡಬೇಕಾಗಿದೆ. ಇದರಿಂದಾಗಿ ಶಿಕ್ಷಕರು ತಮ್ಮ ಜೇಬಿನಿಂದ ಹೆಚ್ಚುವರಿ ತಲಾ ಒಂದು ಮೊಟ್ಟಗೆ 2.80 ತೆರಬೇಕಾಗಿದೆ.

ಪ್ರೇಮ್‍ಜಿ ಫೌಂಡೇಷನ್ ವತಿಯಿಂದ ವಾರದ ನಾಲ್ಕು ದಿನ ಉಚಿತ ಮೊಟ್ಟೆ ಪೂರೈಕೆಯಾದರೆ ಉಳಿದ ಎರಡು ದಿನ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಮೊಟ್ಟೆ ವಿತರಣೆಗಾಗಿ ತಮ್ಮ ಕೈಯಿಂದ ಹಣ ಹಾಕಿ ಮೊಟ್ಟೆ ತಂದು ವಿತರಣೆ ಮಾಡಬೇಕಾಗಿದೆ ಎಂದು ಕೆಲಶಾಲೆಯ ಶಿಕ್ಷಕರು ತಮ್ಮ ನೋವಿನ ಕತೆಯನ್ನು ಮಾಧ್ಯಮದವರಲ್ಲಿ ಹಂಚಿಕೊಂಡರು.

ಬಾಕ್ಸ್‌...60 ಕ್ಕೂ ಆಧಿಕ ಶಾಲೆಗಳಿಗೆ ಇನ್ನೂ ಇಲ್ಲ ಪಠ್ಯಪುಸ್ತಕ

ಈಗಾಗಲೇ ಶಾಲಾ ಕಾಲೇಜು ಆರಂಭಗೊಂಡು ಎರಡು ತಿಂಗಳು ಕಳೆಯುತ್ತಾ ಬಂದರೂ ಹೊಸನಗರ ತಾಲೂಕಿನ 60 ಕ್ಕೂ ಅಧಿಕ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಬಂದಿಲ್ಲ ಎನ್ನಲಾಗಿದೆ.

ರಾಜ್ಯ ಸರ್ಕಾರ ಶಾಲೆ ಆರಂಭದ ದಿನವೇ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸರಬರಾಜು ಮಾಡಲಾಗುತ್ತದೆ. ಕೆಲವು ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಪಠ್ಯಪಸ್ತಕ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಅಧಿಕಾರಿ ವರ್ಗ ಹಾಗೂ ಶಾಲೆಯ ಶಿಕ್ಷಕರು ಹೇಳುವಂತೆ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಕೆಲವು ವಿದ್ಯಾರ್ಥಿಗಳು ಸರ್ಕಾರಿ ಶಾಲೆಯತ್ತ ಬಂದು ದಾಖಲಾಗುವುದರಿಂದಾಗಿ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎನ್ನುತ್ತಾರೆ.

ಕಳೆದ ವರ್ಷದ ದಾಖಲಾತಿಯನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ಪಠ್ಯಪುಸ್ತಕ ಸರಬರಾಜು ಮಾಡಲಾಗಿದೆ.ಈಗ ಶಾಲೆ ಪ್ರಾರಂಭಗೊಂಡಿದ್ದು ಕೆಲವು ವಿದ್ಯಾರ್ಥಿಗಳು ಹೊಸದಾಗಿ ಬಂದು ಪ್ರವೇಶ ಪಡೆದ ಕಾರಣ ಮಕ್ಕಳ ಅಂಕಿ ಅಂಶವನ್ನು ತಾಲೂಕು ಮಟ್ಟದ ಶಿಕ್ಷಣಾಧಿಕಾರಿ ಕಚೇರಿಗೆ ಸಲ್ಲಿಸಿ ಅಗತ್ಯ ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಿದರೆ ಆಗ ಸಂಬಂಧ ಪಟ್ಟ ಅಧಿಕಾರಿವರ್ಗ ತಕ್ಷಣ ಕ್ರಮಕೈಗೊಳ್ಳವ ಮೂಲಕ ಅಕ್ಕ ಪಕ್ಕದ ಶಾಲೆಗಳಲ್ಲಿ ಹೆಚ್ಚುವರಿ ಪಠ್ಯಪುಸ್ತಕಗಳನ್ನು ಪಡೆದು ವಿತರಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಒಟ್ಟಾರೆಯಾಗಿ ಹೊಸನಗರ ತಾಲೂಕಿನ ಕೆಲವು ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳು ಆರಂಭಗೊಂಡಿದ್ದು, ಕೊರತೆಯಿರುವ ಪಠ್ಯ ಪುಸ್ತಕವನ್ನು ತಕ್ಷಣವೇ ಸರಬರಾಜು ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ. ಅದಷ್ಟು ಬೇಗ ಸಮಸ್ಯೆಯಾಗದಂತೆ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು ಎನ್ನಲಾಗಿದೆ.-ಫೋಟೋ.. ಸಾಂದರ್ಭಿಕ ಚಿತ್ರ....