ಸಾರಾಂಶ
ಕಲಾತ್ಮಕವಾಗಿ ಮಕ್ಕಳಿಂದ ಇಂತಹ ಅಭಿನಯ ಬರುತ್ತದೆ ಎಂದು ನಾನು ಊಹಿಸಿರಲಿಲ್ಲ. ಮಕ್ಕಳ ನಾಟಕವಾಗಲಿ ಮತ್ತು ಕಂಸಾಳೆ ನೃತ್ಯಪ್ರದರ್ಶನ ಹಬ್ಬದ ರೀತಿ ಇತ್ತು. ಇದಕ್ಕೆ ಮಕ್ಕಳು ಪೋಷಕರು, ಶಿಕ್ಷಕರಾದ ನಂಜುಂಡಸ್ವಾಮಿ ಮತ್ತು ಮಕ್ಕಳು ಎಲ್ಲರೂ ಅಭಿನಂದನೆಗೆ ಅರ್ಹರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಪಿಇಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಲರವ ಚಿಣ್ಣರ ಮೇಳದಲ್ಲಿ ಮಕ್ಕಳಿಂದ ಮೂಡಿ ಬಂದ ನಾಟಕ ಪ್ರದರ್ಶನಗಳು ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸಿದವು.ತಾಲೂಕಿನ ದೊಡ್ಡ ಬ್ಯಾಡರಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಂದ ವೈವಿಧ್ಯಮಯ ನಾಟಕಗಳು ಪ್ರದರ್ಶನಗೊಂಡಿದ್ದು, ಕಲಾ ಸಿದ್ಧತೆ ಪುಟಾಣಿಗಳ ಗಂಭೀರ ಕಲಾತ್ಮಕತೆಯೊಂದಿಗೆ ಮಕ್ಕಳು ಪ್ರತಿಭೆ, ಸಿದ್ಧತೆಗಳ ಮೂಲಕ ಪ್ರೇಕ್ಷಕರ ಮನ ಗೆದ್ದರು.
ಬಿ.ವಿ.ಕಾರಂತ್ ಅವರ ಕಥಾವಸ್ತುವಿನಲ್ಲಿ ಆಧಾರಿತ ಪಂಜರದ ಶಾಲೆ ಎಂಬ ನಾಟಕವನ್ನು ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳ ಮೂಡಲಪಾಯ ಶೈಲಿಯ ಯಕ್ಷಗಾನ ನಾಟಕ ಕರ್ಣಾರ್ಜುನ ಕಾಳಗ ಭಾರೀ ಮೆಚ್ಚುಗೆ ಪಡೆದುಕೊಂಡಿತು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕಲಾತ್ಮಕವಾಗಿ ಮಕ್ಕಳಿಂದ ಇಂತಹ ಅಭಿನಯ ಬರುತ್ತದೆ ಎಂದು ನಾನು ಊಹಿಸಿರಲಿಲ್ಲ. ಮಕ್ಕಳ ನಾಟಕವಾಗಲಿ ಮತ್ತು ಕಂಸಾಳೆ ನೃತ್ಯಪ್ರದರ್ಶನ ಹಬ್ಬದ ರೀತಿ ಇತ್ತು. ಇದಕ್ಕೆ ಮಕ್ಕಳು ಪೋಷಕರು, ಶಿಕ್ಷಕರಾದ ನಂಜುಂಡಸ್ವಾಮಿ ಮತ್ತು ಮಕ್ಕಳು ಎಲ್ಲರೂ ಅಭಿನಂದನೆಗೆ ಅರ್ಹರು ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಪಾಂಡವಪುರದಲ್ಲಿ ರಂಗಮಂದಿರ ನಿರ್ಮಾಣದ ಕುರಿತು ವಿಶೇಷವಾಗಿ ಮಾತನಾಡಿ, 2008ರಲ್ಲಿ ಆರಂಭವಾದ ಪ್ರಾಜೆಕ್ಟ್ ಈಗ ತ್ರಿಗುಣಿತ ಹಣವಾಗಿ ಎಫ್ ಡಿ ಯಲ್ಲಿ ಇದ್ದು, ಶಾಸಕರು ಧ್ವನಿ ಎತ್ತಿದರೆ ಭವ್ಯ ರಂಗಮಂದಿರ ನಿರ್ಮಾಣ ಸಾಧ್ಯ ಎಂದರು.ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ಅನುದಾನ ಕೊಡಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಪಟ್ಟಣದಲ್ಲಿ ಸುಸಜ್ಜಿತ ಒಂದು ಭವ್ಯ ರಂಗಮಂದಿರ ನಿರ್ಮಾಣವಾಗಲಿ. ಅದಕ್ಕೆ ನನ್ನ ಪೂರ್ಣ ಸಹಕಾರವಿರುತ್ತದೆ. ಇದರಿಂದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದರು.