ಕನ್ನಡಪ್ರಭ ವಾರ್ತೆ ಹಿರಿಯೂರು
ಮಕ್ಕಳ ಪ್ರತಿಭೆ ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ಅದು ಇತರೆ ಮಕ್ಕಳಿಗೂ ಪ್ರೇರಣೆಯಾಗುತ್ತದೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ವಿಶ್ರಾಂತ ಪ್ರಭಾರ ನಿರ್ದೇಶಕ ಡಾ. ಕೆ.ಎಸ್.ರವೀಂದ್ರನಾಥ್ ಹೇಳಿದರು.ನಗರದ ಎ.ಕೃಷ್ಣಪ್ಪ ರೋಟರಿ ಸಭಾಭವನದಲ್ಲಿ ಭಗೀರಥ ನೌಕರರ ಕ್ಷೇಮಾಭಿವೃದ್ಧಿ ವೇದಿಕೆ, ತಾಲೂಕು ಉಪ್ಪಾರ ಸಂಘ, ಭಗೀರಥ ಧಾರ್ಮಿಕ ಟ್ರಸ್ಟ್ ಹಾಗೂ ಭಗೀರಥ ಯುವಕರ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭೆ ಕೇವಲ ಹೆಚ್ಚು ಅಂಕ ಗಳಿಸುವುದಕ್ಕೆ ಮಾತ್ರ ಸೀಮಿತವಲ್ಲ. ಮಕ್ಕಳು ಪಿಯುಸಿ ನಂತರ ಅವರ ಆಸಕ್ತಿಗೆ ಅನುಗುಣವಾಗಿ ವಿಷಯ ಆಯ್ಕೆ ಮಾಡಿಕೊಂಡು ಕಾಲಹರಣ ಮಾಡದೇ ಸತತವಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಉತ್ತಮ ಸಾಧನೆ ಮಾಡಬಹುದು.ಪ್ರಸ್ತುತ ದಿನಮಾನದಲ್ಲಿ ಒತ್ತಡದ ಬದುಕು, ಬದಲಾದಂತಹ ಜೀವನ ಶೈಲಿ, ಹೆಚ್ಚು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣ ಬಳಕೆ, ದುರಭ್ಯಾಸಗಳಿಂದ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತ ಕಾಣಿಸಿಕೊಳ್ಳುತ್ತಿದ್ದು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಮಕ್ಕಳಲ್ಲಿ ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದರು.
ಬೆoಗಳೂರು ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಎನ್.ಸುನೀಲ್ ಕುಮಾರ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಠ್ಯಪುಸ್ತಕ ಜ್ಞಾನದ ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಕಲೆ, ಸಾಹಿತ್ಯ, ಪರಿಸರ ಸಂರಕ್ಷಣೆ, ಸಮಾಜಸೇವೆ ಮತ್ತು ಮಾನವೀಯ ಮೌಲ್ಯಗಳತ್ತಲೂ ವಿದ್ಯಾರ್ಥಿಗಳು ಗಮನಹರಿಸಬೇಕು.ಉತ್ತಮ ಅಂಕಗಳ ಜೊತೆಗೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಶಿಕ್ಷಣದ ನಿಜವಾದ ಉದ್ದೇಶವಾಗಿದೆ ಎಂದರು.
ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಪದ್ಮನಾಭ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಬದುಕು ರೂಪಿಸುವ ಶಿಲ್ಪಿಗಳು. ಶಿಕ್ಷಕರ ತ್ಯಾಗ, ಪ್ರೀತಿ ಮತ್ತು ಮಾರ್ಗದರ್ಶನದಿಂದಲೇ ಸಮಾಜಕ್ಕೆ ಉತ್ತಮ ಪ್ರಜೆಗಳು ದೊರೆಯುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಜೀವನದಲ್ಲಿ ಉನ್ನತ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಕ್ಕಳನ್ನು ಸನ್ಮಾನಿಸಲಾಯಿತು.ರಾಘವೇಂದ್ರ ಮಲ್ಟಿ ಸೆಷ್ಪಾಲಿಟಿ ಆಸ್ಪತ್ರೆ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮರಡಿಹಳ್ಳಿ ವೈದ್ಯಾಧಿಕಾರಿ ಡಾ.ನಾಗರಾಜ್, ಹನುಮಂತಪ್ಪ, ಎಚ್ .ಶಿವಮೂರ್ತಿ, ಎಚ್.ಕೆ.ಗುರುರಾಜ್, ಪ್ರೊ.ಮಂಜುಳಾ ರವೀಂದ್ರನಾಥ್, ಡಾ.ಗುರುರಾಜ್, ಡಾ.ಆಶಿಕ್, ಡಾ.ಮಹೇಶ್, ಬಿಸಿಎಂ ಅಧಿಕಾರಿ ಶಿವಕುಮಾರ್, ಶೇಖರಪ್ಪ, ನಿಂಗರಾಜ್, ಕನಕದಾಸ್, ಮಹೇಶ್,ಮಹಲಿಂಗಪ್ಪ, ವೆಂಕಟೇಶ್, ಸತೀಶ್, ರಾಜಶೇಖರ್, ರಮೇಶ್ ಮುಂತಾದವರು ಹಾಜರಿದ್ದರು.