ಮಕ್ಕಳ ಪ್ರತಿಭಾ ಪ್ರದರ್ಶನ, ಜ್ಞಾನಕ್ಕೆ ಬೇಸಿಗೆ ಶಿಬಿರ ಮದ್ದು: ಡಾ.ಕಿಕ್ಕೇರಿ ಕೃಷ್ಣಮೂರ್ತಿ

| Published : May 15 2025, 01:49 AM IST

ಮಕ್ಕಳ ಪ್ರತಿಭಾ ಪ್ರದರ್ಶನ, ಜ್ಞಾನಕ್ಕೆ ಬೇಸಿಗೆ ಶಿಬಿರ ಮದ್ದು: ಡಾ.ಕಿಕ್ಕೇರಿ ಕೃಷ್ಣಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶಿ ಕ್ರೀಡೆ ಮರೆಯಾಗುತ್ತಿದೆ. ಲಗೋರಿ, ಚಿಣ್ಣಿದಂಡು, ಅಳುಗುಣಿ ಮಣೆ, ಮರಕೋತಿಯಂತಹ ನೂರಾರು ಗ್ರಾಮೀಣ ಆಟಗಳಲ್ಲಿ ಖುಷಿ ಇದೆ. ಇವುಗಳ ಪರಿಚಯ ಮಾಡಿಕೊಟ್ಟು ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಲು, ಜ್ಞಾನವಂತರಾಗಿಸಲು ಇಂತಹ ಶಿಬಿರಗಳು ಅವಶ್ಯಕವಾಗಿವೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಗ್ರಾಮೀಣ ಮಕ್ಕಳ ಪ್ರತಿಭಾ ಪ್ರದರ್ಶನ, ಜ್ಞಾನಕ್ಕೆ ಬೇಸಿಗೆ ಶಿಬಿರಗಳು ಮದ್ದಾಗಿವೆ ಎಂದು ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಗ್ರಾಮೀಣ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು.

ಗ್ರಾಮೀಣ ಮಕ್ಕಳಲ್ಲಿ ಹುಟ್ಟಿನಿಂದ ದೈತ್ಯ ಪ್ರತಿಭೆಗಳಿವೆ. ಗುರ್ತಿಸುವ ಕೆಲಸವಾಗಬೇಕಿದೆ. ಈಜುವುದು, ಓಡುವುದು, ನೆಗೆಯುವುದು, ರಾಗವಾಗಿ ದಣಿವರಿಯದೆ ಕೂಗುವುದು ಸಹಜವಾಗಿದೆ. ಇಂತಹ ಪ್ರತಿಭೆ ಗುರ್ತಿಸಿ ತರಬೇತಿ ನೀಡಬೇಕು ಅಷ್ಟೇ ಎಂದರು.

ದೇಶಿ ಕ್ರೀಡೆ ಮರೆಯಾಗುತ್ತಿದೆ. ಲಗೋರಿ, ಚಿಣ್ಣಿದಂಡು, ಅಳುಗುಣಿ ಮಣೆ, ಮರಕೋತಿಯಂತಹ ನೂರಾರು ಗ್ರಾಮೀಣ ಆಟಗಳಲ್ಲಿ ಖುಷಿ ಇದೆ. ಇವುಗಳ ಪರಿಚಯ ಮಾಡಿಕೊಟ್ಟು ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಲು, ಜ್ಞಾನವಂತರಾಗಿಸಲು ಇಂತಹ ಶಿಬಿರಗಳು ಅವಶ್ಯಕವಾಗಿವೆ ಎಂದರು.

ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಬೇಸಿಗೆ ಶಿಬಿರಗಳು ಗ್ರಾಮೀಣ ಮಕ್ಕಳಿಗೆ ತಲುಪುವ ಹಂತ ತಲುಪಲು ಜಿಲ್ಲಾಧಿಕಾರಿ ಡಾ.ಕುಮಾರ್, ಸಿಇಒ ಕೆ.ಆರ್.ನಂದಿನಿ ಅವರ ಯತ್ನ ಮಾದರಿಯಾಗಿದೆ. ಶಿಬಿರಗಳಿಂದ ಮಕ್ಕಳಿಗೆ ಬಲುಖುಷಿ ನೀಡಲಿದೆ. ಮಕ್ಕಳಿಗೆ ಲಘು ಸಂಗೀತ, ಹರಿಕಥೆ, ಜಾನಪದಗೀತೆ ಎಲ್ಲವನ್ನು ಕಲಿಸಿಕೊಡಬೇಕು. ಗ್ರಾಮೀಣ ಆಟಗಳ ಅರಿವು ಮೂಡಿಸಬೇಕಿದೆ ಎಂದರು.

ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಸಾಸಲು ಗುರುಮೂರ್ತಿ ಮಕ್ಕಳಿಗೆ ಲೇಖನಿ, ಸಿಹಿ ತಿನಿಸು ನೀಡಿ ಕನ್ನಡ ಭಾಷೆ ಉಳಿವಿಗೆ ಮಕ್ಕಳು ಸ್ಪಷ್ಟವಾಗಿ ಕನ್ನಡ ಮೊದಲು ಓದಿ ಬರೆಯಲು ಕಲಿಯಿರಿ ಎಂದು ಉತ್ತೇಜಿಸಿದರು. ಗ್ರಂಥಪಾಲಕ ಲೋಕೇಶ್, ಶಿಬಿರದ ಮೇಲ್ವಿಚಾರಕ ವಿಜಯ್‌ ಇದ್ದರು.

ಫೌಂಡೇಷನ್ ವತಿಯಿಂದ ಆರ್ಥಿಕ ನೆರವು

ಮಂಡ್ಯ: ಕಳೆದ ತಿಂಗಳು ಕಬಡ್ಡಿ ಪಂದ್ಯಾವಳಿ ವೇಳೆ ವೀಕ್ಷಕರ ಗ್ಯಾಲರಿ ಕುಸಿದು ಬಿದ್ದು ಮೃತಪಟ್ಟ ತಾಲೂಕಿನ ಮಲ್ಲಾನಾಯಕನಕಟ್ಟೆ ಗ್ರಾಮದ ನಿವಾಸಿ ಪಾಪಣ್ಣಾಚಾರಿ ಕುಟುಂಬಕ್ಕೆ ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಷನ್ ವತಿಯಿಂದ ಸಾಂತ್ವನ ಹೇಳಿ ಮೃತರ ಪತ್ನಿ ರೇಖಾ ಅವರಿಗೆ ಆರ್ಥಿಕ ನೆರವು ನೀಡಲಾಯಿತು. ಫೌಂಡೇಷನ್ ಗೌರವಾಧ್ಯಕ್ಷ ರವಿಗೌಡ ಮುದ್ದನಘಟ್ಟ, ಖಜಾಂಚಿಗಳಾದ ಶಶಿಕುಮಾರ್ ಬೇಬಿ, ಗ್ರಾಮದ ಮುಖಂಡರಾದ ಚಂದ್ರಣ್ಣ ಮತ್ತು ಗಂಗಣ್ಣ ಇದ್ದರು.