ಇಂದಿನ ಸಂಘರ್ಷಮಯ ವಿಶ್ವದಲ್ಲಿ ಮಹಾತ್ಮ ಗಾಂಧೀಜಿ ಜಗತ್ತಿಗೆ ನೀಡಿದ ಅತ್ಯುನ್ನತ ಮೌಲ್ಯಗಳಾದ ಸತ್ಯ ಮತ್ತು ಅಹಿಂಸೆ ತತ್ವಗಳು ಹೆಚ್ಚು ಪ್ರಸ್ತುತವೆನಿಸಿದ್ದು, ಇದನ್ನು ಮಕ್ಕಳು, ಯುವ ಸಮೂಹ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿಇಂದಿನ ಸಂಘರ್ಷಮಯ ವಿಶ್ವದಲ್ಲಿ ಮಹಾತ್ಮ ಗಾಂಧೀಜಿ ಜಗತ್ತಿಗೆ ನೀಡಿದ ಅತ್ಯುನ್ನತ ಮೌಲ್ಯಗಳಾದ ಸತ್ಯ ಮತ್ತು ಅಹಿಂಸೆ ತತ್ವಗಳು ಹೆಚ್ಚು ಪ್ರಸ್ತುತವೆನಿಸಿದ್ದು, ಇದನ್ನು ಮಕ್ಕಳು, ಯುವ ಸಮೂಹ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಕರೆ ನೀಡಿದರು.ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಲಬುರಗಿ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಅಂಗವಾಗಿ ಗಾಂಧೀಜಿಯವರ ತತ್ವ ಸಂದೇಶ ಕುರಿತು ವಿಶೇಷ ಉಪನ್ಯಾಸ, ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಸರ್ವಧರ್ಮ ಪ್ರಾರ್ಥನೆ -ಸದ್ಭಾವನಾ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಲಬುರಗಿ ಸಂತ ಜೋಸೆಫ್ ಪಿ.ಯು ಕಾಲೇಜಿನ ಉಪ ಪ್ರಾಚಾರ್ಯ ಡಾ. ಚಿ.ಸಿ.ನಿಂಗಣ್ಣ ವಿಶೇಷ ಉಪನ್ಯಾಸ ನೀಡಿದರು. ಟೌನ್ ಹಾಲ್‌ನಲ್ಲಿರುವ ಗಾಂಧಿ ಪ್ರತಿಮೆಗೆ ಜಿಲ್ಲಾಧಿಕಾರಿ ಇಕ್ರಂ ಶರೀಫ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಎಸ್.ಪಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯಿತಿ ಸಿಇಓ ರಾಹುಲ ಸಂಕನೂರ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಮಾಲಾರ್ಪಣೆ ಮಾಡಿ ಬಾಪೂಜಿಗೆ ಗೌರವ ನಮನ ಸಲ್ಲಿಸಿದರು.ಸಾನಿಧ್ಯ ವಹಿಸಿದ್ದ ಮೌಲಾನಾ ಸೈಯದ್ ಖಾಸಿಂ ಬುಖಾರಿ ಖಾದ್ರಿ, ಸೆಂಟ್ ಮೇರಿ ಚರ್ಚ್‌ ಫಾದರ್ ರೊನಾಲ್ಡೋ ಗುರುನಾನಕ್ ಮಠದ ಗ್ರಂಥಿ ಭಾಯ್‌ದೀಪ್ ಸಿಂಗ್‌, ಭಾರತ ಸೇವಾ ದಳದ ರಾಜ್ಯ ಸಂಪನ್ಮೂಲ ಶಿಕ್ಷಕ ಡಾ. ಶಿವಲಿಂಗಪ್ಪ ಗೌಳಿ, ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಸುರೇಶ ಬಡಿಗೇರ್ ಧರ್ಮ ಪಠಣ ಮಾಡಿದರು.

ಭಾರತ ಸೇವಾ ದಳದ ಜಿಲ್ಲಾ ಸಂಘಟಿಕ ಚಂದ್ರಶೇಖರ ಜಮಾದಾರ ನೇತೃತ್ವದಲ್ಲಿ ಸರ್ವಧರ್ಮೀಯ ಪ್ರಾರ್ಥನೆ ನಡೆಯಿತು. ಕಲಾವಿದ ಪ್ರಮೋದಿನಿ ಶೀಲವಂತ ಮತ್ತು ಅವರ ತಂಡದಿಂದ ಸದ್ಭಾವನಾ ಗೀತ ಗಾಯನಗಳ ಜೊತೆಗೆ ಗಾಂಧಿ ಅವರಿಗೆ ಪ್ರಿಯವಾದ ಹಾಡುಗಳನ್ನು ಹಾಡಿದರು. ಪ್ರಮಾಣ ಪತ್ರ ವಿತರಣೆ: ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬಾಪೂಜಿ ಕುರಿತು ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢ, ಪದವಿ ಪೂರ್ವ ಹಾಗೂ ಪದವಿ-ಸ್ನಾತಕೋತ್ತರ ವಿಭಾಗದಿಂದ ತಲಾ ಮೂವರು ಸೇರಿ ಒಟ್ಟು 9 ಜನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಸತ್ಕರಿಸಲಾಯಿತು.

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದೇವಣಗೌಡ ಪಾಟೀಲ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಜಿಲ್ಲಾ ಮಟ್ಟದ ಅಧಿಕಾರಿಗಳು, ವಾರ್ತಾ ಇಲಾಖೆಯ ಸಿಬ್ಬಂದಿ ಇದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಅವರು ಸ್ವಾಗತಿಸಿದರು. ಶಿವರಾಜ ಅಣಜಗಿ ನಿರೂಪಿಸಿದರು.ಪುಟಾಣಿಗಳಿಂದ ಗಾಂಧಿ, ಶಾಸ್ತ್ರಿ ವೇಷ: ನೂಲಿನ ಚರಕದೊಂದಿಗೆ ಗಾಂಧಿ ವೇಷಧಾರಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ವೇಷಧಾರಿ ಪುಟ್ಟ ಮಕ್ಕಳು ಕುಳಿತುಕೊಂಡು ಸರ್ವರ ಗಮನ ಸೆಳೆದರು. ಇನ್ನು ಹತ್ತಾರು ಶಾಲಾ ಮಕ್ಕಳು ಗಾಂಧಿ ವೇಷಧಾರಿಯಾಗಿ ಬಂದು ಕಾರ್ಯಕ್ರಮಕ್ಕೆ ಕಳೆ ತಂದದಿದಲ್ಲದೆ ಡಿ.ಸಿ ಅವರೊಂದಿಗೆ ಫೋಟೊ ತೆಗೆಸಿಕೊಂಡು ಖುಷಿಪಟ್ಟರು.