ಸಾರಾಂಶ
ಪರ್ಕಳ ಸಮೀಪದ ಶೆಟ್ಟಿಬೆಟ್ಟು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ನೂತನ ‘ಸುಜ್ಞಾನ ಸಭಾಂಗಣವ’ವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು.
ಶೆಟ್ಟಿಬೆಟ್ಟು ಶಾಲೆಯ ಸುಜ್ಞಾನ ಸಭಾಂಗಣ ಉದ್ಘಾಟನೆ, ಮಕ್ಕಳಿಗೆ ಟ್ರ್ಯಾಕ್ ಸೂಟ್ ವಿತರಣೆ
ಕನ್ನಡಪ್ರಭ ವಾರ್ತೆ ಮಣಿಪಾಲವಿದ್ಯಾರ್ಥಿಗಳು ಕೇವಲ ಪಠ್ಯಗಳಿಗೆ ಮೀಸಲಾಗದೆ, ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ತಂದೆ ತಾಯಿ ಕಂಡ ಕನಸನ್ನು ನನಸಾಗಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ನೀಡಿದರು.
ಅವರು ಇಲ್ಲಿನ ಪರ್ಕಳ ಸಮೀಪದ ಶೆಟ್ಟಿಬೆಟ್ಟು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ನೂತನ ‘ಸುಜ್ಞಾನ ಸಭಾಂಗಣವ’ವನ್ನು ಉದ್ಘಾಟಿಸಿ, ಹಳೆವಿದ್ಯಾರ್ಥಿ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಟ್ರ್ಯಾಕ್ ಸೂಟ್ ವಿತರಿಸಿ ಮಾತನಾಡಿದರು.ಸಭಾಂಗಣಕ್ಕೆ ಸುಜ್ಞಾನ ಎಂದು ಹೆಸರಿಡಲಾಗಿದೆ. ಹೆಸರೇ ಸೂಚಿಸುತ್ತದೆ ಉಡುಪಿ ಜನ ಬುದ್ಧಿವಂತರು ಅಂತ. ಜ್ಞಾನವೆಂದರೆ ಬೆಳಕು, ಸುಜ್ಞಾನವೆಂದರೆ ಬೆಳಕಿನ ಪ್ರಖರತೆ. ಪ್ರಖರವಾದ ಬೆಳಕಿನೆಡೆಗೆ ಇಲ್ಲಿಯ ಕುಡಿಗಳು ಮುನ್ನಡೆದರೆ ಕರ್ನಾಟಕದ ಹೆಮ್ಮೆಯ ಶಿಕ್ಷಣ ಭವನ ಸುಜ್ಞಾನ ಭವನ ಆಗುತ್ತದೆ. ಹಾಗಾಗಲಿ ಎಂದು ಕೃಷ್ಣನಲ್ಲಿ ಬೇಡಿಕೊಳ್ಳುತ್ತೇನೆ ಎಂದರು.ಈ ವೇಳೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ತಾಲೂಕು ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಪಂ ಸಿಇಒ ಪ್ರತೀಕ್ ಬಾಯಲ್, ಡಿಡಿಪಿಐ ಲೋಕೇಶ್, ಬಿಇಒ ಶಬಾನಾ ಅಂಜುಂ, ಸ್ಥಳೀಯ ನಗರಸಭಾ ಸದಸ್ಯೆ ಅಶ್ವಿನಿ ಪೂಜಾರಿ, ಹಳೆವಿದ್ಯಾರ್ಥಿ ಸಂಘ ಅಧ್ಯಕ್ಷ ಸುಕೇಶ್ ಕುಂದರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.