ಹಾವೇರಿ: ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವ ಶಕ್ತಿ ಗುರು ಪರಂಪರೆಗೆ ಮಾತ್ರ ಇದೆ. ಗುರುವಿನ ಮಾರ್ಗದಲ್ಲಿ ನಡೆಯುವಂತಹ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದು ದಿಂಡದಹಳ್ಳಿ ಪಶುಪತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಹನುಮನಹಳ್ಳಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಮುಳ್ಳುಗದ್ದುಗೆ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಮ್ಮ ರಾಜ್ಯ, ದೇಶಗಳಲ್ಲಿ ಮಠಾಧೀಶರು, ಮಹಾತ್ಮರ ಜೀವನಾನುಷ್ಠಾನ, ಚೈತನ್ಯದ ತಪೋಶಕ್ತಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಸದಾಕಾಲ ಸದ್ಭಕ್ತರ ಒಳಿತಿಗಾಗಿ ಮಠ ಮಾನ್ಯಗಳು ಶ್ರಮಿಸುತ್ತವೆ. ಪ್ರಸ್ತುತ ದಿನಗಳಲ್ಲಿ ಗುರು ಪರಂಪರೆ ಬಹಳಷ್ಟು ಗಟ್ಟಿಯಾಗುವ ಅವಶ್ಯಕತೆ ಇದೆ. ಹರ ಮುನಿದರೂ ಗುರು ಕಾಯುವನು, ಗುರು ಮುನಿದರೆ ಯಾರು ಕಾಪಾಡಲ್ಲ. ಗುರುವಿನ ಆಜ್ಞೆಯಂತೆ ಭಕ್ತರು ನಡೆದುಕೊಳ್ಳಬೇಕು. ಗುರುವಿನ ವಾಕ್ಯಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು, ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವ ವಧು-ವರರು ತಮ್ಮ ಬದುಕಿನುದ್ದಕ್ಕೂ ಪರಸ್ಪರ, ಪ್ರೀತಿ, ವಿಶ್ವಾಸ, ನಂಬಿಕೆಯನ್ನಿಟ್ಟು ಬದುಕಿನ ಕ್ಷಣಗಳನ್ನು ಅನುಭವಿಸಬೇಕು. ಗಂಡ ಹೆಂಡತಿ ಅನ್ಯೋನ್ಯವಾಗಿ ಜೀವನ ನಡೆಸಬೇಕು. ಹೊಸದಾಗಿ ಮನೆಗೆ ಬಂದಾಗ ಸೊಸೆಯನ್ನು ಅತ್ತೆ ಮಗಳಂತೆ ಕಾಣಬೇಕು, ಸೊಸೆಯು ಕೂಡ ತನ್ನ ಅತ್ತೆಯನ್ನು ತಾಯಿಯಂತೆ ಕಾಣಬೇಕು. ಅಂದಾಗ ಮಾತ್ರ ಅತ್ತೆ ಸೊಸೆ ಬಾಂಧವ್ಯದ ಬೆಸುಗೆ ಸಹಬಾಳ್ವೆಯಿಂದ ಕೂಡಿರುತ್ತದೆ. ಕುಟುಂಬಗಳು ಮನೆಯೊಂದು ಮೂರು ಬಾಗಿಲು ಆಗದೇ ಮನಸ್ಸುಗಳು ಒಂದೇ ಮನೆ ಆಗಿರಲು ಸಾಧ್ಯವಾಗುತ್ತದೆ ಎಂದರು. ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಆಗಿದ್ದಾರೆ. ಧರ್ಮಸಭೆಯಲ್ಲಿ ಪಾಲ್ಗೊಂಡಿರುವ ತಾಯಂದಿರು ತಮ್ಮ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಬೇಕು. ಒಳ್ಳೆಯ ಸಂಸ್ಕಾರ, ಸಂಸ್ಕೃತಿ, ಧರ್ಮ, ಆಚಾರ ವಿಚಾರಗಳ ಬಗ್ಗೆ ತಿಳಿ ಹೇಳಬೇಕು. ಭವಿಷ್ಯದ ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ಬೆಳೆಸಬೇಕು. ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ, ಸಮಾಜಕ್ಕೆ ನಾನೇನು ಕೊಡುಗೆ ನೀಡಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಕ್ಕಳ ಬದುಕಿಗೆ ಪೋಷಕರೇ ಶಿಲ್ಪಿಗಳು. ಆ ಶಿಲ್ಪಿಗಳು ಹೇಗೆ ಮಕ್ಕಳನ್ನು ಬೆಳೆಸುತ್ತಾರೆ ಎಂಬುದರ ಮೇಲೆ ಮಕ್ಕಳ ಭವಿಷ್ಯ ನಿರ್ಧಾರ ಆಗುತ್ತದೆ. ಈ ನಿಟ್ಟಿನಲ್ಲಿ ಧರ್ಮ ಸಂಸ್ಕೃತಿ ಪರಂಪರೆಯಡಿ ಮಕ್ಕಳನ್ನು ಬೆಳೆಸಬೇಕೆಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಶ್ರೀಮಠದ ಹಾಲಸಿದ್ಧರಾಮ ಸ್ವಾಮೀಜಿ, ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಶಿವಲಿಂಗೇಶ್ವರ ಸ್ವಾಮೀಜಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದರ್ಶನಕುಮಾರ ಲಮಾಣಿ ಮಾತನಾಡಿದರು. ಕುರುವತ್ತಿಯ ಸಿದ್ಧನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮಠದ ಹಾಲಮುದುಕೇಶ್ವರ ಸ್ವಾಮೀಜಿ, ಅಭಿನವ ಹಾಲಸ್ವಾಮೀಜಿ, ಸಣ್ಣ ಹಾಲಸ್ವಾಮೀಜಿ, ಅಭಿಷೇಕ ಹಾಲಸ್ವಾಮೀಜಿ, ಓಂಕಾರ ಹಾಲಸ್ವಾಮೀಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವೀರೇಶ ಕಮ್ಮಾರ ನಿರ್ವಹಿಸಿದರು.
ಗುರುವಿನ ಮಾರ್ಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು
. ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವ ಶಕ್ತಿ ಗುರು ಪರಂಪರೆಗೆ ಮಾತ್ರ ಇದೆ. ಗುರುವಿನ ಮಾರ್ಗದಲ್ಲಿ ನಡೆಯುವಂತಹ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದು ದಿಂಡದಹಳ್ಳಿ ಪಶುಪತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.